ಶಿವಮೊಗ್ಗ: ರಾಜ್ಯಕ್ಕೆ ಐದು ಪ್ರಮುಖ ಅಣೆಕಟ್ಟುಗಳ ನಿರ್ಮಾಣಕ್ಕಾಗಿ ತನ್ನ ಭೂಮಿಯನ್ನು ಧಾರೆ ಎರೆದು ಇಡೀ ನಾಡಿಗೆ ಬೆಳಕು ನೀಡಿದ ಹೊಸನಗರದ ಜನತೆ, ಇಂದಿಗೂ ಮೂಲಸೌಕರ್ಯಗಳಿಲ್ಲದೆ ಕತ್ತಲೆಯಲ್ಲಿ ಬದುಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ‘ಹೊಸನಗರ ವಿಧಾನಸಭಾ ಕ್ಷೇತ್ರ’ವನ್ನು ಮರುಸ್ಥಾಪಿಸಬೇಕು ಎಂಬ ಒತ್ತಾಯದೊಂದಿಗೆ ಬೃಹತ್ ಹೋರಾಟಕ್ಕೆ ಸಜ್ಜಾಗಲಾಗಿದೆ.
ಈ ಕುರಿತು ರಿಪ್ಪನ್‌ಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಅವರು, ಏಪ್ರಿಲ್ 5 ಮತ್ತು 6 ರಂದು ಮೂಲೆಗದ್ದೆ ಅಭಿನವ ಚನ್ನಬಸವ ಶ್ರೀಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಭೌಗೋಳಿಕವಾಗಿ ವಿಸ್ತಾರವಾಗಿರುವ ಹೊಸನಗರ ತಾಲೂಕಿನ ಹೋಬಳಿಗಳು ಪ್ರಸ್ತುತ ತೀರ್ಥಹಳ್ಳಿ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಗಿರುವುದರಿಂದ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಹಿನ್ನಡೆಯನ್ನು ಸರಿಪಡಿಸಲು ಹೊಸನಗರಕ್ಕೆ ಪ್ರತ್ಯೇಕ ಕ್ಷೇತ್ರದ ಅಸ್ತಿತ್ವ ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮಾಜಿ ಶಾಸಕ ಬಿ. ಸ್ವಾಮಿ ರಾವ್ ಅವರೂ ಪಾಲ್ಗೊಳ್ಳಲಿರುವ ಈ ಪಾದಯಾತ್ರೆಯು ಏಪ್ರಿಲ್ 6ರಂದು ಸಂಜೆ 4 ಗಂಟೆಗೆ ರಿಪ್ಪನ್‌ಪೇಟೆಯ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಹೋರಾಟವು ಯಾವುದೇ ಒಂದು ಪಕ್ಷ ಅಥವಾ ಜಾತಿಗೆ ಸೀಮಿತವಾಗಿರದೆ, ಸಂಪೂರ್ಣವಾಗಿ ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಯಲ್ಲಿ ನಡೆಯುತ್ತಿದೆ. ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಧರ್ಮದ ಗುರುಗಳು ಈ ಮರುಸ್ಥಾಪನಾ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ.
ಮೂಲ ನಿವಾಸಿಗಳು ಮತ್ತು ಸಾರ್ವಜನಿಕರು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ, 2028ರ ವೇಳೆಗೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯುವ ಸಂಕಲ್ಪವನ್ನು ಯಶಸ್ವಿಗೊಳಿಸಬೇಕೆಂದು ಕಲಗೋಡು ರತ್ನಾಕರ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದು, ಕ್ಷೇತ್ರದ ಪುನರ್ ವಿಂಗಡಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು.








