ಬೆಂಗಳೂರು: ಭಾರತ ಸರ್ಕಾರದ ಗೃಹ ಸಚಿವಾಲಯವು 2027ರ ಜನಗಣತಿಗಾಗಿ (Census 2027) ಸಿದ್ಧತೆಗಳನ್ನು ಆರಂಭಿಸಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಾರಿ ಮನೆಗಳ ಪಟ್ಟಿ ಮತ್ತು ಗೃಹ ಗಣತಿಗಾಗಿ ಒಟ್ಟು 33 ಪ್ರಮುಖ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದೆ.
ಮಾರ್ಚ್ 6, 2026 ರಂದು ಹೊರಡಿಸಲಾದ ಈ ಅಧಿಸೂಚನೆಯಲ್ಲಿ, ಜನಗಣತಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ನೀಡಬೇಕಾದ ಮಾಹಿತಿಗಳ ವಿವರಗಳನ್ನು ನೀಡಲಾಗಿದೆ.
ಪ್ರಶ್ನಾವಳಿಯಲ್ಲಿರುವ ಪ್ರಮುಖ ಅಂಶಗಳು:
ಜನಗಣತಿ ಸಮಯದಲ್ಲಿ ನಿಮ್ಮಿಂದ ಸಂಗ್ರಹಿಸಲಾಗುವ ಮಾಹಿತಿಗಳು ಈ ಕೆಳಗಿನಂತಿವೆ:
ಮನೆಯ ವಿವರ: ಕಟ್ಟಡದ ಸಂಖ್ಯೆ, ಮನೆಯ ವಾಸದ ಸ್ಥಿತಿಗತಿ, ಗೋಡೆ, ಚಾವಣಿ ಮತ್ತು ನೆಲಕ್ಕೆ ಬಳಸಿರುವ ಸಾಮಗ್ರಿಗಳ ಬಗ್ಗೆ ಮಾಹಿತಿ.
ಕುಟುಂಬದ ಮಾಹಿತಿ: ಕುಟುಂಬದ ಮುಖ್ಯಸ್ಥರ ಹೆಸರು, ಲಿಂಗ, ಸದಸ್ಯರ ಒಟ್ಟು ಸಂಖ್ಯೆ ಹಾಗೂ ಅವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರೇ ಎಂಬ ವಿವರ.
ಮೂಲಸೌಕರ್ಯ: ಕುಡಿಯುವ ನೀರಿನ ಲಭ್ಯತೆ, ವಿದ್ಯುತ್ ಮೂಲ, ಶೌಚಾಲಯದ ಸೌಲಭ್ಯ, ಅಡುಗೆಗೆ ಬಳಸುವ ಇಂಧನ (LPG/PNG) ಮತ್ತು ಮನೆಯ ಮಾಲೀಕತ್ವದ ವಿವರ.
ಆಸ್ತಿ ಮತ್ತು ಉಪಕರಣಗಳು: ರೇಡಿಯೋ, ಟೆಲಿವಿಷನ್, ಇಂಟರ್ನೆಟ್ ಸಂಪರ್ಕ, ಲ್ಯಾಪ್‌ಟಾಪ್/ಕಂಪ್ಯೂಟರ್, ಸೈಕಲ್, ಮೋಟಾರ್ ಸೈಕಲ್ ಅಥವಾ ಕಾರು ಹೊಂದಿರುವ ಬಗ್ಗೆ ಮಾಹಿತಿ.
ಆಹಾರ ಮತ್ತು ಸಂವಹನ: ಕುಟುಂಬವು ಬಳಸುವ ಪ್ರಮುಖ ಧಾನ್ಯ ಹಾಗೂ ಜನಗಣತಿ ಸಂಬಂಧಿತ ಸಂವಹನಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ.
ಈ ಮಾಹಿತಿಯನ್ನು ಕೇವಲ ಜನಗಣತಿಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ. ಜನಗಣತಿ ಕಾಯ್ದೆ 1948ರ ಅಡಿಯಲ್ಲಿ ಸರ್ಕಾರವು ಈ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಲಾಗಿದೆ.









