ಚೈನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ತಮ್ಮದೇ ಸ್ವಯಂ ತೀರ್ಮಾನ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ತಮ್ಮ ಟಿಕೆಟ್ ಕಟ್ ಆಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಅವರು, ಪಕ್ಷದ ನಾಯಕತ್ವಕ್ಕೆ ಈ ಮೊದಲೇ ಲಿಖಿತವಾಗಿ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಇದೀಗ ತಾವು ರಾಜ್ಯಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದಾರೆ.u
ಹೌದು ಈ ವಿಚಾರವಾಗಿ ಮಾತನಾಡಿದ ಅವರು, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಈ ತೀರ್ಮಾನವನ್ನು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ತಿಳಿಸಿದ್ದಲ್ಲದೆ, ಲಿಖಿತವಾಗಿಯೂ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ನಾಯಕತ್ವಕ್ಕೆ ಮಾಹಿತಿ ನೀಡಿದ್ದೆ ತಮ್ಮ ವಿರುದ್ಧ ಹರಿದಾಡುತ್ತಿದ್ದ ಟಿಕೆಟ್ ಕಟ್ ಆರೋಪಗಳನ್ನು ತಳ್ಳಿಹಾಕಿದ ಅವರು, ಚುನಾವಣೆಗೆ ನಿಲ್ಲದಿರುವುದು ತಮ್ಮದೇ ಸ್ವಯಂ ತೀರ್ಮಾನ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಸ್ಪರ್ಧಿಸದಿರುವ ಬಗ್ಗೆ ಈಗಾಗಲೇ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೆ. ಪಿಯೂಷ್ ಗೋಯಲ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರಿಗೆ ಸಹ ಈ ವಿಚಾರ ತಿಳಿಸಿದ್ದೆ ಎಂದು ಹೇಳಿದರು. ನನ್ನ ತೀರ್ಮಾನವನ್ನು ಗೌರವಿಸಿದ ಬಿಜೆಪಿ ಹೈಕಮಾಂಡ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ನನಗೆ ಚುನಾವಣಾ ಪ್ರಚಾರದ ಹೊಣೆಗಾರಿಕೆಯನ್ನು ನೀಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.








