ದಾವಣಗೆರೆ: ರಾಜ್ಯದ ನಿರುದ್ಯೋಗಿ ಯುವಜನತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಈ ವರ್ಷ ಸುಮಾರು 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಡಳಿತ ಯಂತ್ರಕ್ಕೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಜೆಟ್ ಮತ್ತು ಆರ್ಥಿಕ ಸ್ಥಿತಿಗತಿ
ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಸಿಎಂ, “ಬಜೆಟ್‌ನಲ್ಲಿ ರಾಜ್ಯದ ಆರ್ಥಿಕತೆಯ ಎಲ್ಲಾ ಅಂಶಗಳನ್ನು ಪಾರದರ್ಶಕವಾಗಿ ದಾಖಲಿಸಲಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದ ಮೇಲೆ ಸುಮಾರು ₹5,30,000 ಕೋಟಿ ಸಾಲ ಹೇರಲಾಗಿತ್ತು. ಆದರೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ತಲುಪಿಸುತ್ತಿದ್ದು, ಇಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ,” ಎಂದರು.
ಬಾಕಿ ಬಿಲ್ ಪಾವತಿ
ಹಿಂದಿನ ಸರ್ಕಾರವು ಗುತ್ತಿಗೆದಾರರಿಗೆ ನೀಡಬೇಕಿದ್ದ ಸುಮಾರು ₹29,000 ಕೋಟಿ ಮೊತ್ತದ ಬಿಲ್‌ಗಳನ್ನು ಬಾಕಿ ಉಳಿಸಿತ್ತು. ಇದರಲ್ಲಿ ಈಗಾಗಲೇ ನಮ್ಮ ಸರ್ಕಾರ ₹24,000 ಕೋಟಿ ಬಾಕಿ ಹಣವನ್ನು ಪಾವತಿಸಿದೆ. ಈ ಬಗ್ಗೆ ಅಧಿವೇಶನದಲ್ಲಿ ದಾಖಲೆ ಸಹಿತ ಉತ್ತರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಲೆ ಏರಿಕೆಯ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ನಿಯಂತ್ರಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.ಕೇಂದ್ರ ನೀಡುವ ಇಂಧನವನ್ನು ವಿತರಿಸುವ ಕೆಲಸವನ್ನು ಮಾತ್ರ ರಾಜ್ಯ ಸರ್ಕಾರ ಮಾಡುತ್ತದೆ.ನೆರೆರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂಧನ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಇಂದಿಗೂ ಕಡಿಮೆಯಿದೆ.
ಒಳಮೀಸಲಾತಿ ಮತ್ತು ಸಾಮಾಜಿಕ ನ್ಯಾಯ
ನಮ್ಮ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಬದ್ಧವಾಗಿದೆ. ಬಿಜೆಪಿ ಎಂದಿಗೂ ಶ್ರೀಮಂತರ ಪರವಾಗಿದ್ದು, ಅವರಿಗೆ ಅಹಿಂದ ವರ್ಗಗಳ ಬಗ್ಗೆ ಕಾಳಜಿಯಿಲ್ಲ. ನಾವು ‘ಯೂನಿವರ್ಸಲ್ ಬೇಸಿಕ್ ಇನ್ಕಂ’ ತತ್ವದಡಿ ಎಲ್ಲರಿಗೂ ಸಮಾನವಾಗಿ ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತಿದ್ದೇವೆ. ಇದು ಬಡತನ ರೇಖೆಗಿಂತ ಕೆಳಗಿರುವ ಜನರ ಸಬಲೀಕರಣಕ್ಕೆ ಸಹಕಾರಿಯಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.








