ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಮೆರಿಕದ ವಾಯುಸೇನೆಯ ‘ಕಣ್ಣು ಮತ್ತು ಕಿವಿ’ ಎಂದೇ ಪರಿಗಣಿಸಲ್ಪಟ್ಟಿದ್ದ ಸುಮಾರು ₹2,500 ಕೋಟಿ ($300 Million) ಮೌಲ್ಯದ E-3 ಸೆಂಟ್ರಿ (AWACS) ವಿಮಾನ ಸಂಪೂರ್ಣವಾಗಿ ನಾಶವಾಗಿದೆ.
ಮಾರ್ಚ್ 27ರಂದು ಇರಾನ್ ನಡೆಸಿದ ಈ ದಾಳಿಯಲ್ಲಿ ಅಮೆರಿಕದ 10ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಬೋಯಿಂಗ್ E-3 ಸೆಂಟ್ರಿ ವಿಮಾನದ ಹಿಂಭಾಗಕ್ಕೆ ಕ್ಷಿಪಣಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ವಿಮಾನವು ಸುಟ್ಟು ಕರಕಲಾಗಿದೆ. ಇದರೊಂದಿಗೆ ಕೆಲವು ಇಂಧನ ತುಂಬುವ (Refueling) ವಿಮಾನಗಳಿಗೂ ಹಾನಿಯಾಗಿದೆ.
ಈ ವಿಮಾನವು ಯುದ್ಧಭೂಮಿಯಲ್ಲಿ ಶತ್ರುಗಳ ಚಲನವಲನಗಳನ್ನು ಪತ್ತೆಹಚ್ಚುವ ‘ಬ್ರೇನ್’ (Brain) ಇದ್ದಂತೆ. ಇದರ ನಾಶದಿಂದಾಗಿ ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ದೊಡ್ಡ ಹಿನ್ನಡೆಯಾಗಿದೆ.








