ಚೆನ್ನೈ : ಐಪಿಎಲ್ ಸೀಸನ್ ಶುರುವಾಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿರುವ ಮಾಜಿ ನಾಯಕ ಎಂ.ಎಸ್. ಧೋನಿ, ಈ ಸೀಸನ್‌ನ ಮೊದಲ ಆರು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ. 44 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್ ಆಗಬಹುದು ಎಂದು ಹೇಳಲಾಗುತ್ತಿದ್ದು, ಈ ಗಾಯದ ಸುದ್ದಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.
ಹೌದು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದರೂ, ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದು ಅನುಮಾನ. ಗಾಯದ ಹಿನ್ನೆಲೆಯಲ್ಲಿ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜುಗೆ ಬಿಟ್ಟುಕೊಟ್ಟು, ಬ್ಯಾಟಿಂಗ್ ಮೇಲೆ ಮಾತ್ರ ಗಮನ ಹರಿಸುವ ‘ಇಂಪ್ಯಾಕ್ಟ್ ಸಬ್’ ಆಟಗಾರನಾಗಿ ಧೋನಿಯನ್ನು ಬಳಸಿಕೊಳ್ಳಲು ಮ್ಯಾನೇಜ್‌ಮೆಂಟ್ ಯೋಚಿಸುತ್ತಿದೆ. ಕಳೆದ ಎರಡು ಸೀಸನ್‌ಗಳಲ್ಲಿಯೂ ಧೋನಿ ಕೊನೆಯ ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್‌ಗೆ ಇಳಿಯುವ ತಂತ್ರ ಅನುಸರಿಸಿದ್ದರು.
ಕಳೆದ ಒಂದು ತಿಂಗಳಿಂದ ಧೋನಿ ಚೆನ್ನೈನಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದರು. ಆದರೆ ಈಗ ಗಾಯದ ಕಾರಣ ಅವರಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿ ಬೇಕು ಎಂದು ತಂಡದ ಮೂಲಗಳು ತಿಳಿಸಿವೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯಕ್ಕಾಗಿ ಸಿಎಸ್‌ಕೆ ತಂಡ ಗುವಾಹಟಿಗೆ ಪ್ರಯಾಣ ಬೆಳೆಸಿದಾಗ, ಧೋನಿ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದಾರೆ. ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ವಾಪಸ್ ಬರಬಹುದು ಎಂದು ನಿರೀಕ್ಷಿಸಲಾಗಿದೆಯಾದರೂ, ಸದ್ಯಕ್ಕೆ ಇದು ಖಚಿತವಾಗಿಲ್ಲ.








