ಇಂದಿನ ಬದಲಾದ ಆಹಾರ ಪದ್ಧತಿ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಅನೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಮೂಲವ್ಯಾಧಿ ಅಥವಾ ಫೈಲ್ಸ್ (Piles). ಮಲವಿಸರ್ಜನೆಯ ಸಮಯದಲ್ಲಿ ವಿಪರೀತ ನೋವು, ಗುದದ್ವಾರದ ಭಾಗದಲ್ಲಿ ಊತ ಮತ್ತು ರಕ್ತಸ್ರಾವದಂತಹ ಲಕ್ಷಣಗಳು ವ್ಯಕ್ತಿಯನ್ನು ಹೈರಾಣಾಗಿಸುತ್ತವೆ.
ಮೂಲವ್ಯಾಧಿಗೆ ಪ್ರಮುಖ ಕಾರಣವೇನು?
ದೀರ್ಘಕಾಲದ ಮಲಬದ್ಧತೆ ಮೂಲವ್ಯಾಧಿಗೆ ಅತಿ ದೊಡ್ಡ ಕಾರಣ. ಮೂಲವ್ಯಾಧಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ:
ಬಾಹ್ಯ ಮೂಲವ್ಯಾಧಿ: ಇಲ್ಲಿ ಗುದದ್ವಾರದ ಸುತ್ತ ಊತ, ತುರಿಕೆ ಮತ್ತು ಉರಿ ಹೆಚ್ಚಾಗಿರುತ್ತದೆ.
ರಕ್ತ ಮೂಲವ್ಯಾಧಿ: ಮಲವಿಸರ್ಜನೆಯ ಸಮಯದಲ್ಲಿ ನೋವಿನ ಜೊತೆಗೆ ರಕ್ತಸ್ರಾವವಾಗುತ್ತದೆ.
ಆಯುರ್ವೇದ ತಜ್ಞರ ಪ್ರಕಾರ, ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಓಮಕಾಳು (Ajwain) ಮೂಲವ್ಯಾಧಿ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲದು. ಇದರಲ್ಲಿರುವ ಉರಿಯೂತ ವಿರೋಧಿ (Anti-inflammatory) ಗುಣಗಳು ನೋವು ಮತ್ತು ಊತವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಓಮಕಾಳನ್ನು ಬಳಸುವ ವಿಧಾನಗಳು:
ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಆಯುರ್ವೇದ ತಜ್ಞರು ಈ ಕೆಳಗಿನ 4 ಸುಲಭ ಮಾರ್ಗಗಳನ್ನು ಸೂಚಿಸಿದ್ದಾರೆ:
ಓಮಕಾಳಿನ ನೀರು: ಒಂದು ಲೋಟ ನೀರಿಗೆ ಒಂದು ಚಮಚ ಓಮಕಾಳು ಹಾಕಿ 5 ರಿಂದ 7 ನಿಮಿಷ ಕುದಿಸಿ. ಈ ನೀರನ್ನು ಸೋಸಿಕೊಂಡು ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿ ದೂರವಾಗಿ ಊತ ಕಡಿಮೆಯಾಗುತ್ತದೆ.
ಓಮಕಾಳು ಮತ್ತು ಬೆಲ್ಲ: ಓಮಕಾಳನ್ನು ಸ್ವಲ್ಪ ಹುರಿದು, ಅದಕ್ಕೆ ಬೆಲ್ಲ ಸೇರಿಸಿ ಸಣ್ಣ ಉಂಡೆಗಳನ್ನು (ಲಾಡು) ತಯಾರಿಸಿಕೊಳ್ಳಿ. ಊಟದ ನಂತರ ಈ ಉಂಡೆಗಳನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಪೈಲ್ಸ್ ಲಕ್ಷಣಗಳು ಹತೋಟಿಗೆ ಬರುತ್ತವೆ.
ಸೋಂಪು ಕಾಳಿನ ಮಿಶ್ರಣ: ಅರ್ಧ ಚಮಚ ಸೋಂಪು ಮತ್ತು ಅರ್ಧ ಚಮಚ ಓಮಕಾಳನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಐದು ನಿಮಿಷಗಳ ನಂತರ ಸೋಸಿಕೊಂಡು ದಿನಕ್ಕೆ ಎರಡು ಬಾರಿ ಊಟದ ನಂತರ ಕುಡಿಯಿರಿ. ಇದು ಮಲಬದ್ಧತೆಯನ್ನು ಹೋಗಲಾಡಿಸಲು ಸಹಕಾರಿ.
ಮಜ್ಜಿಗೆಯೊಂದಿಗೆ ಓಮಕಾಳು: ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಹುರಿದ ಓಮಕಾಳಿನ ಪುಡಿಯನ್ನು ಬೆರೆಸಿ ಕುಡಿಯಿರಿ. ಇದು ಹೊಟ್ಟೆಯ ಶಾಖವನ್ನು ಕಡಿಮೆ ಮಾಡುವುದಲ್ಲದೆ, ಮೂಲವ್ಯಾಧಿಯಿಂದ ಉಂಟಾಗುವ ಅಸ್ವಸ್ಥತೆಯನ್ನು ನೀಗಿಸುತ್ತದೆ.
ಗಮನಿಸಿ: ಪೈಲ್ಸ್ ಸಮಸ್ಯೆ ತೀವ್ರವಾಗಿದ್ದರೆ ಅಥವಾ ರಕ್ತಸ್ರಾವ ಹೆಚ್ಚಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.








