ಡೆಹ್ರಾಡೂನ್: ಮುಂಬರುವ ಪವಿತ್ರ ‘ಚಾರ್‌ಧಾಮ್ ಯಾತ್ರೆ’ಯ ಸಂದರ್ಭದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಮತ್ತು ಸ್ಥಳೀಯ ಹೋಟೆಲ್ ಮಾಲೀಕರಿಗೆ ತೊಂದರೆಯಾಗದಂತೆ ತಡೆಯಲು ಉತ್ತರಾಖಂಡ ಸರ್ಕಾರವು ತನ್ನ ‘ಪ್ಲಾನ್ ಬಿ’ (Plan B) ಅನ್ನು ಸಕ್ರಿಯಗೊಳಿಸಿದೆ. ಇದರ ಭಾಗವಾಗಿ ಯಾತ್ರಾ ಮಾರ್ಗದುದ್ದಕ್ಕೂ ಭಾರಿ ಪ್ರಮಾಣದಲ್ಲಿ ‘ಸೌದೆ ಡಿಪೋ’ಗಳನ್ನು (Fuelwood Depots) ತೆರೆಯಲು ತೀರ್ಮಾನಿಸಿದೆ.
ಅಡುಗೆ ಅನಿಲದ ಕೊರತೆಯನ್ನು ನೀಗಿಸಲು ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಮಾರ್ಗಗಳಲ್ಲಿ ಅರಣ್ಯ ನಿಗಮದ ವತಿಯಿಂದ ಸೌದೆ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.ಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಆಹಾರದ ವ್ಯವಸ್ಥೆಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಡಿಪೋಗಳಲ್ಲಿ ರಿಯಾಯಿತಿ ದರದಲ್ಲಿ ಸೌದೆ ಮತ್ತು ಇದ್ದಿಲನ್ನು ಪೂರೈಸಲು ಸರ್ಕಾರ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.
ಪರಿಸರ ಕಾಳಜಿ: ಕಾಡಿನಿಂದ ಮರಗಳನ್ನು ಕಡಿಯುವ ಬದಲಿಗೆ, ಬಿದ್ದಿರುವ ಒಣ ಮರಗಳು ಮತ್ತು ಡಿಪೋಗಳಲ್ಲಿ ಸಂಗ್ರಹವಾಗಿರುವ ಕಟ್ಟಿಗೆಯನ್ನು ಮಾತ್ರ ಬಳಸಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.








