ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ದುಬೈನಲ್ಲಿರುವ ಅಮೆರಿಕ ಸೇನೆಯ ‘ರಹಸ್ಯ ಅಡಗುದಾಣಗಳ’ (Army Hideouts) ಮೇಲೆ ತಾನು ಕ್ಷಿಪಣಿ ಮತ್ತು ಡ್ರೋನ್ ಮೂಲಕ ಭೀಕರ ದಾಳಿ ನಡೆಸಿರುವುದಾಗಿ ಇರಾನ್ ಘೋಷಿಸಿದೆ. ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಅಮೆರಿಕದ ಸಿಬ್ಬಂದಿ ಇದ್ದರು ಮತ್ತು ಅವರೆಲ್ಲರಿಗೂ ಭಾರಿ ಸಾವು-ನೋವು ಉಂಟಾಗಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದುಬೈನ ಎರಡು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅತ್ಯಂತ ನಿಖರವಾದ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಇರಾನ್ ಹೇಳಿಕೊಂಡಿದೆ.
ಇರಾನ್ ಪ್ರಕಾರ, ಮೊದಲ ನೆಲೆ ಮೇಲೆ ನಡೆದ ದಾಳಿಯ ವೇಳೆ 400 ಮಂದಿ ಹಾಗೂ ಎರಡನೇ ನೆಲೆಯಲ್ಲಿ 100ಕ್ಕೂ ಹೆಚ್ಚು ಅಮೆರಿಕನ್ ಸೈನಿಕರಿದ್ದರು ಎನ್ನಲಾಗಿದೆ.
’ಶವಪೆಟ್ಟಿಗೆಗಳಲ್ಲಿ ಮರಳುವಿರಿ’: ಅಮೆರಿಕನ್ನರು ಈ ಪ್ರದೇಶವನ್ನು ‘ಸೈನಿಕರ ಸ್ಮಶಾನ’ವನ್ನಾಗಿ ಮಾಡುವ ಮುನ್ನ ಇಲ್ಲಿಂದ ಕಾಲ್ಕಿತ್ತಬೇಕು, ಇಲ್ಲವಾದಲ್ಲಿ ಅವರು ಶವಪೆಟ್ಟಿಗೆಯಲ್ಲೇ ಮರಳಬೇಕಾಗುತ್ತದೆ ಎಂದು ಇರಾನ್ ಸೇನಾ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಇರಾನ್‌ನ ಈ ವರದಿಗಳು ಸಂಪೂರ್ಣ ‘ಸುಳ್ಳು ಮತ್ತು ಅಪಪ್ರಚಾರ’ ಎಂದು ತಳ್ಳಿಹಾಕಿದೆ. ದುಬೈನಲ್ಲಿ ಅಮೆರಿಕದ ಯಾವುದೇ ಸೈನಿಕರ ಮೇಲೆ ದಾಳಿ ನಡೆದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ತನ್ನ ವಾಯು ರಕ್ಷಣಾ ವ್ಯವಸ್ಥೆಯು ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದ್ದು, ನಾಗರಿಕರು ಆತಂಕಪಡದಂತೆ ಮನವಿ ಮಾಡಿದೆ.








