ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ನೌಕೆಗಳ ಸಂಚಾರಕ್ಕೆ ಸಂಚಕಾರ ಎದುರಾಗಿರುವ ನಡುವೆಯೇ, ಭಾರತದ ಎರಡು ಬೃಹತ್ ಎಲ್ಪಿಜಿ (LPG) ಹಡಗುಗಳು ಸುರಕ್ಷಿತವಾಗಿ ಗುಜರಾತ್ ತೀರವನ್ನು ತಲುಪಿವೆ. ಇದು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ.
ಕತಾರ್ನಿಂದ ಎಲ್ಪಿಜಿ ಹೊತ್ತು ತರುತ್ತಿದ್ದ ಈ ಎರಡು ಭಾರತೀಯ ನೌಕೆಗಳು ಅತ್ಯಂತ ಅಪಾಯಕಾರಿ ಎನ್ನಲಾದ ‘ಹಾರ್ಮುಜ್ ಜಲಸಂಧಿ’ಯನ್ನು ಯಶಸ್ವಿಯಾಗಿ ದಾಟಿವೆ. ಶನಿವಾರ ಮುಂಜಾನೆ ಇವು ಗುಜರಾತ್ನ ವಾಡಿ ನಾರ್ (Vadinar) ಟರ್ಮಿನಲ್ ತಲುಪಿ ಲಂಗರು ಹಾಕಿವೆ.
ವರದಿಗಳ ಪ್ರಕಾರ, ಈ ನೌಕೆಗಳು ಸಂಘರ್ಷದ ವಲಯದಲ್ಲಿ ಸಂಚರಿಸುವಾಗ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ದೂರದಿಂದಲೇ ನಿಗಾ ಇರಿಸಿದ್ದವು. ಭಾರತೀಯ ಹಡಗುಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡಲಾಗಿತ್ತು ಎನ್ನಲಾಗಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಶೇ. 20ರಷ್ಟು ತೈಲ ಮತ್ತು ಗ್ಯಾಸ್ ಪೂರೈಕೆಯಾಗುತ್ತದೆ. ಪ್ರಸ್ತುತ ಯುದ್ಧದಿಂದಾಗಿ ಈ ಮಾರ್ಗದಲ್ಲಿ ಸಂಚಾರ ದುಬಾರಿಯಾಗಿದ್ದು, ವಿಮೆ ದರಗಳು ಹೆಚ್ಚಾಗಿವೆ. ಇಂತಹ ಪರಿಸ್ಥಿತಿಯಲ್ಲೂ ಭಾರತಕ್ಕೆ ಗ್ಯಾಸ್ ಪೂರೈಕೆ ತಲುಪಿರುವುದು ಸಮಾಧಾನಕರ ಸಂಗತಿ.
ವಾಡಿ ನಾರ್ ಟರ್ಮಿನಲ್ ಮಹತ್ವ: ಗುಜರಾತ್ನ ಈ ಟರ್ಮಿನಲ್ ಭಾರತದ ಪ್ರಮುಖ ಇಂಧನ ಆಮದು ಕೇಂದ್ರವಾಗಿದ್ದು, ಇಲ್ಲಿಂದಲೇ ಉತ್ತರ ಮತ್ತು ಪಶ್ಚಿಮ ಭಾರತದ ಹಲವು ರಾಜ್ಯಗಳಿಗೆ ಅಡುಗೆ ಅನಿಲ ಪೂರೈಕೆಯಾಗುತ್ತದೆ.








