ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಬೆನಕ ಪ್ರಸಾದ್ ಎನ್.ಜೆ (IPS KN 2022) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ರಾಜ್ಯಪಾಲರ ಆಜ್ಞೆಯ ಮೇರೆಗೆ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.
ಸಾಗರದಲ್ಲಿ ದಕ್ಷತೆಯ ಛಾಪು ಮೂಡಿಸಿದ್ದ ಅಧಿಕಾರಿ
ಡಾ. ಬೆನಕ ಪ್ರಸಾದ್ ಅವರು ಸಾಗರ ಉಪವಿಭಾಗದ ಎಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅತ್ಯುತ್ತಮ ಹಾಗೂ ಜನಸ್ನೇಹಿ ಪೊಲೀಸ್ ಸೇವೆಗೆ ಹೆಸರಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಾಲೂಕಿನಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ್ದರು. ತಮ್ಮ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಒಬ್ಬ ಅತ್ಯಂತ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಕಾರ್ಯವೈಖರಿಯು ಇಲಾಖೆಯಲ್ಲಿ ಮಾತ್ರವಲ್ಲದೆ ಸಾರ್ವಜನಿಕರಲ್ಲೂ ಅಪಾರ ಪ್ರಶಂಸೆಗೆ ಒಳಗಾಗಿತ್ತು.
ಡಾ.ಬೆನಕ ಪ್ರಸಾದ್ ಹಿನ್ನಲೆ
ಡಾ. ಎನ್. ಜೆ. ಬೆನಕ ಪ್ರಸಾದ್ ಅವರು ಕರ್ನಾಟಕದ ಪ್ರತಿಭಾವಂತ ಐಪಿಎಸ್ (IPS) ಅಧಿಕಾರಿಯಾಗಿದ್ದು, ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ 92ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮೂಲತಃ ವೈದ್ಯರಾಗಿರುವ ಇವರು, ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ASP) ಸೇವೆ ಸಲ್ಲಿಸುತ್ತಿದ್ದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಮೂಲದವರಾದ ಬೆನಕ ಪ್ರಸಾದ್, ಬೆಂಗಳೂರಿನ ಬಿಎಂಸಿಆರ್ಐ (BMCRI) ನಿಂದ ಎಂಬಿಬಿಎಸ್ (MBBS) ಪದವಿ ಪಡೆದಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿದ್ದರೂ, ದೇಶ ಸೇವೆ ಮಾಡುವ ಕನಸಿನೊಂದಿಗೆ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವೆಗಳ ಫಲಿತಾಂಶದಲ್ಲಿ ಡಾ. ಬೆನಕ ಪ್ರಸಾದ್ 92ನೇ ರ‍್ಯಾಂಕ್ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದರು.
ಬೆನಕ ಪ್ರಸಾದ್ ಅವರ ತಂದೆ ಎಚ್. ಜಯಪ್ಪ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ ಗೃಹಣಿ. ಸಹೋದರ ಮತ್ತು ಸಹೋದರಿಯರು ಇದ್ದಾರೆ. 2018ರಲ್ಲಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿದ ಬಳಿಕ ನಾಗರಿಕ ಸೇವಾ ಪರೀಕ್ಷೆಗೆ ಸತತ 4 ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದರು. 3ನೇ ಪ್ರಯತ್ನದಲ್ಲೇ 92ನೇ ರ‍್ಯಾಂಕ್ ಪಡೆದು ಆಯ್ಕೆಯಾಗಿದ್ದ ಅವರು, ಸಾಗರ ತಾಲ್ಲೂಕು ಎಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಡಾ.ಬೆನಕ ಪ್ರಸಾದ್ ವರ್ಗಾವಣೆ
ಇಂದು ರಾಜ್ಯ ಸರ್ಕಾರವು ಅವರನ್ನು ಮುಂದಿನ ಆದೇಶದವರೆಗೆ ಅವರು ಶಿವಮೊಗ್ಗ (ಎ) ಉಪವಿಭಾಗದ ಎಎಸ್ಪಿಯಾಗಿ ವರ್ಗಾವಣೆ ಮಾಡಿದೆ. ಸಾಗರದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದ ಡಾ. ಬೆನಕ ಪ್ರಸಾದ್ ಅವರು ಇದೀಗ ಶಿವಮೊಗ್ಗ ನಗರ ಉಪವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದರಿಂದ, ಅಲ್ಲಿಯೂ ತಮ್ಮ ದಕ್ಷ ಹಾಗೂ ಜನಪರ ಆಡಳಿತವನ್ನು ಮುಂದುವರಿಸಲಿದ್ದಾರೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









