ಅಬುಧಾಬಿ: ಪಶ್ಚಿಮ ಏಷ್ಯಾದಲ್ಲಿ (ಅಮೆರಿಕ-ಇಸ್ರೇಲ್-ಇರಾನ್) ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಯುಎಇ ರಾಜಧಾನಿ ಅಬುಧಾಬಿಯಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದೆಯಾದರೂ, ಅದರ ಅವಶೇಷಗಳು ‘ಖಲೀಫಾ ಎಕನಾಮಿಕ್ ಝೋನ್’ (KEZAD) ಸಮೀಪ ಬಿದ್ದ ಪರಿಣಾಮ ಐವರು ಭಾರತೀಯರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಇರಾನ್ ಕಡೆಯಿಂದ ಬಂದ ಕ್ಷಿಪಣಿಯನ್ನು ಯುಎಇ ರಕ್ಷಣಾ ವ್ಯವಸ್ಥೆಯು ಮಸೀದಿಯೊಂದರ ಸಮೀಪ ಹೊಡೆದುರುಳಿಸಿದೆ. ಆದರೆ, ಅದರ ಅವಶೇಷಗಳು ಭಾರಿ ವೇಗದಲ್ಲಿ ಕೆಜಾಡ್ (KEZAD) ಕೈಗಾರಿಕಾ ಪ್ರದೇಶದ ಮೇಲೆ ಬಿದ್ದಿವೆ.
ಐವರು ಭಾರತೀಯರಿಗೆ ಗಾಯ: ಈ ಘಟನೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಐವರು ಭಾರತೀಯ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಸರ್ಕಾರಿ ಮಾಧ್ಯಮ ಕಚೇರಿ (ADMO) ಖಚಿತಪಡಿಸಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಪ್ರಾಣಾಪಾಯದಿಂದ ಹೊರತಾಗಿದೆ ಎಂದು ತಿಳಿದುಬಂದಿದೆ.
ಕ್ಷಿಪಣಿಯ ಅವಶೇಷಗಳು ಬಿದ್ದ ತೀವ್ರತೆಗೆ ಕೈಗಾರಿಕಾ ವಲಯದ ಎರಡು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುಎಇ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಮತ್ತು ಕಾನೂನು ಸಹಾಯವನ್ನು ಒದಗಿಸುತ್ತಿದೆ.ಕಳೆದ ಕೆಲವು ದಿನಗಳಿಂದ ಯುಎಇ ಮೇಲೆ ನಿರಂತರವಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆಯುತ್ತಿವೆ. ಎರಡು ದಿನಗಳ ಹಿಂದಷ್ಟೇ ಇದೇ ರೀತಿ ಅವಶೇಷಗಳು ಬಿದ್ದು ಒಬ್ಬ ಭಾರತೀಯ ಮತ್ತು ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದರು.








