ಢಾಕಾ: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯು ನಡೆಸಿದ ಭೀಕರ ನರಮೇಧಕ್ಕೆ (Genocide) ಅಂತರಾಷ್ಟ್ರೀಯ ಮಟ್ಟದಲ್ಲಿ ನ್ಯಾಯ ಒದಗಿಸಬೇಕು ಎಂಬ ಬಾಂಗ್ಲಾದೇಶದ ಬೇಡಿಕೆಗೆ ಭಾರತ ಸರ್ಕಾರ ಈಗ ಸಂಪೂರ್ಣ ಬೆಂಬಲ ಘೋಷಿಸಿದೆ. ಪಾಕಿಸ್ತಾನದ ಅಂದಿನ “ಭೀಕರ ಅಮಾನವೀಯ ಕೃತ್ಯಗಳನ್ನು” ಖಂಡಿಸಿರುವ ಭಾರತ, ಈ ಘಟನೆಯನ್ನು ಜಾಗತಿಕವಾಗಿ ‘ನರಮೇಧ’ ಎಂದು ಅಧಿಕೃತವಾಗಿ ಗುರುತಿಸಬೇಕು ಎಂದು ಆಗ್ರಹಿಸಿದೆ.
ಪ್ರತಿ ವರ್ಷ ಮಾರ್ಚ್ 25ನ್ನು ಬಾಂಗ್ಲಾದೇಶವು ‘ನರಮೇಧ ಸ್ಮರಣಾರ್ಥ ದಿನ’ವಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪ್ರತಿನಿಧಿಗಳು, ಪಾಕಿಸ್ತಾನಿ ಸೇನೆಯಿಂದ ಲಕ್ಷಾಂತರ ಅಮಾಯಕರು ಬಲಿಯಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪಾಕ್ ಕೃತ್ಯಕ್ಕೆ ಖಂಡನೆ: 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪಾಕ್ ಸೇನೆಯು ನಡೆಸಿದ ವ್ಯವಸ್ಥಿತ ಹತ್ಯೆಗಳು, ಅತ್ಯಾಚಾರ ಮತ್ತು ದೌರ್ಜನ್ಯಗಳು ಮಾನವ ಇತಿಹಾಸದ ಅತ್ಯಂತ ಕಪ್ಪು ಚುಕ್ಕೆ ಎಂದು ಭಾರತ ಬಣ್ಣಿಸಿದೆ.
ಈ ಭೀಕರ ಘಟನೆಯನ್ನು ವಿಶ್ವಸಂಸ್ಥೆಯು ಅಧಿಕೃತವಾಗಿ ‘ನರಮೇಧ’ ಎಂದು ಘೋಷಿಸಬೇಕು ಎಂಬ ಬಾಂಗ್ಲಾದೇಶದ ದಶಕಗಳ ಕಾಲದ ಹೋರಾಟಕ್ಕೆ ಭಾರತ ಈಗ ಧ್ವನಿಗೂಡಿಸಿದೆ.ಭಾರತದ ಈ ನಡೆ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರ ಉಂಟುಮಾಡಲಿದ್ದು, ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.1971ರ ಯುದ್ಧದಲ್ಲಿ ಭಾರತೀಯ ಸೇನೆಯು ಬಾಂಗ್ಲಾದೇಶದ ಮುಕ್ತಿಬಾಹಿನಿಗೆ ಬೆಂಬಲ ನೀಡಿ, ಕೇವಲ 13 ದಿನಗಳಲ್ಲಿ ಪಾಕಿಸ್ತಾನಿ ಸೇನೆಯನ್ನು ಶರಣಾಗುವಂತೆ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.








