ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣಕ್ಕೆ ವೇಗ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ, ರಾಜ್ಯದ ಎಲ್ಲಾ ರಾಜಸ್ವ ನಿರೀಕ್ಷಕರು (Revenue Inspector) ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ (Village Administrative Officer) ಉಚಿತವಾಗಿ ‘ಕ್ರೋಮ್‌ಬುಕ್’ (Chromebook) ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಕಂದಾಯ ಆಯುಕ್ತಾಲಯ ಆದೇಶ ಹೊರಡಿಸಿದೆ.
ಯೋಜನೆಯ ಉದ್ದೇಶ:
ಭೂಮಿ, ಮೋಜಣಿ ಹಾಗೂ ಎಜೆಎಸ್ಕೆ (AJSK) ತಂತ್ರಾಂಶಗಳ ಮೂಲಕ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳನ್ನು ಹಳ್ಳಿಗಳ ಮಟ್ಟದಲ್ಲೇ ಡಿಜಿಟಲ್ ರೂಪದಲ್ಲಿ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಲ್ಯಾಪ್‌ಟಾಪ್ ಪಡೆಯಲು ಇರುವ ಪ್ರಮುಖ ನಿಯಮಗಳು:
ಅಧಿಕೃತ ಕೆಲಸಕ್ಕೆ ಮಾತ್ರ: ಈ ಕ್ರೋಮ್‌ಬುಕ್‌ಗಳನ್ನು ಕೇವಲ ಇಲಾಖೆಯ ಅಧಿಕೃತ ಕೆಲಸಗಳಿಗೆ ಮಾತ್ರ ಬಳಸಬೇಕು. ದುರ್ಬಳಕೆ ಮಾಡಿಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.
ಒಬ್ಬರಿಗೆ ಒಂದು ಮಾತ್ರ: ಒಬ್ಬ ರಾಜಸ್ವ ನಿರೀಕ್ಷಕರು ಹೆಚ್ಚುವರಿ ಹೊಬಳಿಗಳ ಜವಾಬ್ದಾರಿ ಹೊಂದಿದ್ದರೂ ಸಹ, ಅವರಿಗೆ ಕೇವಲ ಒಂದು ಲ್ಯಾಪ್‌ಟಾಪ್ ಮಾತ್ರ ನೀಡಲಾಗುತ್ತದೆ.
ಕರ್ತವ್ಯ ಸ್ಥಳದ ಆಧಾರ: ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕಿನಲ್ಲೇ ಲ್ಯಾಪ್‌ಟಾಪ್ ಪಡೆಯಲು ಅವಕಾಶವಿರುತ್ತದೆ.
ನಿವೃತ್ತಿ ಅಥವಾ ವರ್ಗಾವಣೆ: ಸಿಬ್ಬಂದಿಗಳು ನಿವೃತ್ತರಾದಾಗ, ಪದೋನ್ನತಿ ಹೊಂದಿದಾಗ ಅಥವಾ ದೀರ್ಘಾವಧಿ ರಜೆ ಮೇಲೆ ತೆರಳುವಾಗ ಲ್ಯಾಪ್‌ಟಾಪ್ ಅನ್ನು ತಹಶೀಲ್ದಾರರಿಗೆ ಹಿಂತಿರುಗಿಸುವುದು ಕಡ್ಡಾಯವಾಗಿದೆ.
ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗೆ ಇಲ್ಲ: ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ರಾಜಸ್ವ ನಿರೀಕ್ಷಕರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ವರದಿ ಸಲ್ಲಿಕೆಗೆ ಸೂಚನೆ:
ಲ್ಯಾಪ್‌ಟಾಪ್ ವಿತರಿಸಿದ ನಂತರ ಅದರ ಸಂಪೂರ್ಣ ಮಾಹಿತಿ (ಸೀರಿಯಲ್ ನಂಬರ್ ಸೇರಿದಂತೆ) ಮತ್ತು ಸಿಬ್ಬಂದಿಯ ವಿವರಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಚೇರಿಗೆ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಅವರು ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ.









