ಬೆಂಗಳೂರು: ನೀವು ಮನೆ ಅಥವಾ ಸೈಟ್ ಹೊಂದಿದ್ದೀರಾ? ನಿಮ್ಮ ಆಸ್ತಿಗೆ ಡಿಜಿಟಲ್ ಮಾನ್ಯತೆ ನೀಡುವ ‘ಇ-ಖಾತೆ’ (E-Khata) ಮಾಡಿಸುವುದು ಈಗ ಅತ್ಯಗತ್ಯ. ಹಿಂದೆ ಗ್ರಾಮ ಪಂಚಾಯತಿಗಳಲ್ಲಿ ರಿಜಿಸ್ಟರ್‌ಗಳಲ್ಲಿ ಬರೆಯಲಾಗುತ್ತಿದ್ದ ಖಾತೆಗಳು ಈಗ ಡಿಜಿಟಲೀಕರಣಗೊಂಡಿದ್ದು, ‘ಇ-ಸ್ವತ್ತು’ ಪೋರ್ಟಲ್ ಮೂಲಕ ಇ-ಖಾತಾವನ್ನು ಸುಲಭವಾಗಿ ಪಡೆಯಬಹುದು.
ಗ್ರಾಮ ಪಂಚಾಯತ್ ಇ-ಖಾತೆ ಎಂದರೇನು?
ಇ-ಖಾತೆ ಎಂದರೆ ನಿಮ್ಮ ಆಸ್ತಿಯ ಮಾಲೀಕತ್ವ ಮತ್ತು ತೆರಿಗೆ ಪಾವತಿಯ ವಿವರಗಳನ್ನು ಒಳಗೊಂಡ ಡಿಜಿಟಲ್ ದಾಖಲೆ. ಇದರಲ್ಲಿ ಆಸ್ತಿಯ ವಿಸ್ತೀರ್ಣ, ಮಾಲೀಕರ ಹೆಸರು, ತೆರಿಗೆ ಪಾವತಿಯ ಸ್ಥಿತಿ ಮತ್ತು ಅಪ್ರೂವಲ್ ವಿವರಗಳು ಆನ್‌ಲೈನ್‌ನಲ್ಲಿ ದಾಖಲಾಗಿರುತ್ತವೆ. ಇದು ಆಸ್ತಿಗೆ ಕಾನೂನುಬದ್ಧ ಮಾನ್ಯತೆ ನೀಡುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಮನೆಗಳು.
ಡಿಸಿ ಕನ್ವರ್ಷನ್ ಆಗಿರುವ ಸೈಟ್‌ಗಳು.
ರೆವೆನ್ಯೂ ಸೈಟ್‌ಗಳು ಮತ್ತು ವಿಲೇಜ್ ಸರ್ವೇ ನಂಬರ್ ಹೊಂದಿರುವ ಪ್ರಾಪರ್ಟಿಗಳು.
ಅಗತ್ಯವಿರುವ ದಾಖಲೆಗಳು:
ಇ-ಖಾತೆಗಾಗಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಆಸ್ತಿಯ ಕ್ರಯ ಪತ್ರ (Sale Deed).
ಕಳೆದ 3 ವರ್ಷಗಳ ಆಸ್ತಿ ತೆರಿಗೆ ಪಾವತಿಸಿದ ರಸೀದಿ.
ಡಿ.ಸಿ. ಕನ್ವರ್ಷನ್ ಸರ್ಟಿಫಿಕೇಟ್ (ಅನ್ವಯವಾಗುವುದಾದರೆ).
ಸರ್ವೇ ಮ್ಯಾಪ್ ಅಥವಾ ವಿಲೇಜ್ ಮ್ಯಾಪ್ ಪ್ರತಿ.
ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ಪ್ರತಿ.
ವಿದ್ಯುತ್ ಅಥವಾ ನೀರಿನ ಬಿಲ್.
ಗುರುತಿನ ಚೀಟಿ (ಆಧಾರ್ ಅಥವಾ ಪ್ಯಾನ್ ಕಾರ್ಡ್).
ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಫೋಟೋ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಹಂತ 1: ಗ್ರಾಮ ಪಂಚಾಯತ್ ಕಚೇರಿ ಅಥವಾ ತಾಲೂಕು ಮಟ್ಟದ ಇ-ಗವರ್ನೆನ್ಸ್ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹಂತ 2: ನೀವು ಸಲ್ಲಿಸಿದ ಅರ್ಜಿಯ ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸ್ಥಳಕ್ಕೆ ಭೇಟಿ ನೀಡಿ ಆಸ್ತಿಯ ಸರಹದ್ದು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
ಹಂತ 3: ಎಲ್ಲವೂ ಸರಿಯಾಗಿದ್ದಲ್ಲಿ, ಸಿಸ್ಟಮ್‌ನಲ್ಲಿ ಆಸ್ತಿಗೆ ಖಾತೆ ಸಂಖ್ಯೆ ಜನರೇಟ್ ಆಗುತ್ತದೆ.
ಹಂತ 4: ಪಿಡಿಒ ಅಥವಾ ಕಾರ್ಯದರ್ಶಿಗಳು ಡಿಜಿಟಲ್ ಸಹಿ ಮಾಡಿದ ನಂತರ, ನಿಮ್ಮ ಇ-ಖಾತೆ ಸಿದ್ಧವಾಗುತ್ತದೆ.
ಡೌನ್‌ಲೋಡ್ ಮಾಡುವುದು ಹೇಗೆ?
ಒಮ್ಮೆ ಇ-ಖಾತೆ ಅನುಮೋದನೆಗೊಂಡ ಮೇಲೆ, ಸಾರ್ವಜನಿಕರು ‘ಇ-ಸ್ವತ್ತು’ ಪೋರ್ಟಲ್ ಅಥವಾ ‘ಸೇವಾ ಸಿಂಧು’ ವೆಬ್‌ಸೈಟ್ ಮೂಲಕ ತಮ್ಮ ಇ-ಖಾತೆ ಸರ್ಟಿಫಿಕೇಟ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.








