ಜೆರುಸಲೇಂ/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’15 ಅಂಶಗಳ ಶಾಂತಿ ಯೋಜನೆ’ಯನ್ನು (15-Point Peace Plan) ಮುಂದಿಟ್ಟಿದ್ದಾರೆ. ಆದರೆ, ಈ ಯೋಜನೆಯ ಭಾಗವಾಗಿ ಟ್ರಂಪ್ ಅವರು ಇರಾನ್ ಜೊತೆಗೆ ‘ಅಪೂರ್ಣ ಅಥವಾ ಅರೆಬರೆ’ ಒಪ್ಪಂದಕ್ಕೆ ಸಹಿ ಹಾಕಬಹುದು ಎಂಬ ಭೀತಿ ಇಸ್ರೇಲ್ ಅನ್ನು ಕಾಡತೊಡಗಿದೆ.
ಯುದ್ಧವನ್ನು ಕೊನೆಗಾಣಿಸಲು ಟ್ರಂಪ್ ಆಡಳಿತವು 15 ಪ್ರಮುಖ ಷರತ್ತುಗಳನ್ನೊಳಗೊಂಡ ಶಾಂತಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಇದು ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಕ್ಷಿಪಣಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಗುರಿ ಹೊಂದಿದೆ.ಇರಾನ್ ಅನ್ನು ಸಂಪೂರ್ಣವಾಗಿ ಹತ್ತಿಕ್ಕುವ ಮೊದಲು ಟ್ರಂಪ್ ಅವರು ಯಾವುದಾದರೂ ಆತುರದ ಒಪ್ಪಂದಕ್ಕೆ ಒಪ್ಪಿಗೆ ನೀಡಬಹುದು ಎಂಬುದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸರ್ಕಾರದ ಆತಂಕವಾಗಿದೆ. ಇಂತಹ “ಅರೆಬರೆ ಒಪ್ಪಂದ” ಭವಿಷ್ಯದಲ್ಲಿ ಇರಾನ್‌ಗೆ ಮತ್ತೆ ಶಕ್ತಿ ತುಂಬಬಹುದು ಎಂದು ಇಸ್ರೇಲ್ ವಾದಿಸುತ್ತಿದೆ.
ಅಮೆರಿಕವು ಇರಾನ್ ಮೇಲೆ ಕಠಿಣ ನಿಲುವು ತಳೆಯಬೇಕು ಮತ್ತು ಯಾವುದೇ ಕಾರಣಕ್ಕೂ ಅವರ ಪರಮಾಣು ಮಹತ್ವಾಕಾಂಕ್ಷೆಗೆ ಅವಕಾಶ ನೀಡಬಾರದು ಎಂದು ಇಸ್ರೇಲ್ ಅಧಿಕಾರಿಗಳು ಶ್ವೇತಭವನದ ಮೇಲೆ ಒತ್ತಡ ಹೇರುತ್ತಿದ್ದಾರೆ.








