ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಈ ಯುದ್ಧವನ್ನು ನಾವು ಈಗಾಗಲೇ ಗೆದ್ದಿದ್ದೇವೆ. ಮಿಲಿಟರಿ ಶಕ್ತಿಯ ದೃಷ್ಟಿಯಿಂದ ನೋಡುವುದಾದರೆ ಇರಾನ್ ಈಗ ಸತ್ತಂತೆಯೇ (Militarily they are dead),” ಎಂದು ಟ್ರಂಪ್ ಘೋಷಿಸುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಇರಾನ್ನ ಪ್ರಮುಖ ಸೇನಾ ನೆಲೆಗಳು ಮತ್ತು ಭದ್ರತಾ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ದಾಳಿಗಳ ನಂತರ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದ ಸೇನಾ ಸಾಮರ್ಥ್ಯದ ಮುಂದೆ ಇರಾನ್ ಮಂಡಿಯೂರಿವೆ ಎಂಬುದು ಅವರ ವಾದ.
“ಇರಾನ್ ಇನ್ನು ಮುಂದೆ ಅಮೆರಿಕ ಅಥವಾ ಅದರ ಮಿತ್ರ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಸ್ಥಿತಿಯಲ್ಲಿಲ್ಲ. ಅವರ ರಕ್ಷಣಾ ವ್ಯವಸ್ಥೆಯನ್ನು ನಾವು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದೇವೆ,” ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈ ಹೇಳಿಕೆಯ ಮೂಲಕ ಟ್ರಂಪ್ ಅವರು ಕೇವಲ ಇರಾನ್ಗೆ ಮಾತ್ರವಲ್ಲದೆ, ಅಮೆರಿಕದ ಶಕ್ತಿಯನ್ನು ಸವಾಲು ಹಾಕುವ ಇತರ ರಾಷ್ಟ್ರಗಳಿಗೂ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಅವರ ಈ ‘ವಿಜಯದ ಘೋಷಣೆ’ಯು ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಒಂದು ಕಡೆ ಇರಾನ್ ಸೌಹಾರ್ದ ನೌಕೆಗಳಿಗೆ ಹಾದಿ ಮಾಡಿಕೊಡುತ್ತಿದೆ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಟ್ರಂಪ್ ಅವರ ಈ ಕಠಿಣ ಮಾತುಗಳು ಯುದ್ಧ ವಿರಾಮದ ಸಾಧ್ಯತೆಯನ್ನು ದೂರವಾಗಿಸಿವೆ.







