ಲಂಡನ್/ತೆಹ್ರಾನ್: ಯುದ್ಧ ಎಂದರೆ ಕೇವಲ ಸಾವು-ನೋವು ಮತ್ತು ಆಸ್ತಿಪಾಸ್ತಿ ನಾಶ ಮಾತ್ರವಲ್ಲ, ಅದು ಭೂಮಿಯ ಪರಿಸರದ ಮೇಲೆ ಸರಿಪಡಿಸಲಾಗದಂತಹ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಇತ್ತೀಚಿನ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವೇ ಸಾಕ್ಷಿ. ಕೇವಲ ಕಳೆದ ಎರಡು ವಾರಗಳ ಯುದ್ಧವು ಬರೋಬ್ಬರಿ 50 ಲಕ್ಷ ಟನ್ (5 ಮಿಲಿಯನ್ ಟನ್) ಹಸಿರುಮನೆ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದೆ ಎಂದು ಹವಾಮಾನ ಆಧಾರಿತ ಸಂಶೋಧನಾ ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿ ನೀಡಿದೆ.
84 ದೇಶಗಳ ಒಟ್ಟು ಮಾಲಿನ್ಯಕ್ಕಿಂತಲೂ ಹೆಚ್ಚು!
ಈ ಯುದ್ಧದಿಂದ ಉಂಟಾದ ಮಾಲಿನ್ಯವು ವಿಶ್ವದ ಅತ್ಯಂತ ಕಡಿಮೆ ಮಾಲಿನ್ಯ ಹೊರಸೂಸುವ 84 ದೇಶಗಳ ಒಟ್ಟು ವಾರ್ಷಿಕ ಮಾಲಿನ್ಯಕ್ಕಿಂತಲೂ ಅಧಿಕವಾಗಿದೆ. ಕೇವಲ 14 ದಿನಗಳಲ್ಲಿ ಉಂಟಾದ ಈ ಮಾಲಿನ್ಯವು ಕುವೈತ್ ಅಥವಾ ಐಸ್‌ಲ್ಯಾಂಡ್‌ನಂತಹ ದೇಶಗಳ ಇಡೀ ವರ್ಷದ ಇಂಗಾಲದ ಹೊರಸೂಸುವಿಕೆಗೆ ಸಮನಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮಾಲಿನ್ಯಕ್ಕೆ ಪ್ರಮುಖ ಕಾರಣಗಳು:
-
ಕಟ್ಟಡಗಳ ಧ್ವಂಸ: ಇರಾನ್‌ನ ರೆಡ್ ಕ್ರೆಸೆಂಟ್ ವರದಿ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದ ಸುಮಾರು 20,000 ನಾಗರಿಕ ಕಟ್ಟಡಗಳು ಹಾನಿಗೊಳಗಾಗಿವೆ. ಈ ಕಟ್ಟಡಗಳ ನಾಶದಿಂದಲೇ ಸುಮಾರು 24 ಲಕ್ಷ ಟನ್ ಕಾರ್ಬನ್ ಡೈಆಕ್ಸೈಡ್ (CO2e) ಬಿಡುಗಡೆಯಾಗಿದೆ.
-
ತೈಲ ಘಟಕಗಳ ಮೇಲೆ ದಾಳಿ: ತೆಹ್ರಾನ್ ಸೇರಿದಂತೆ ಇರಾನ್‌ನ ವಿವಿಧ ಭಾಗಗಳಲ್ಲಿರುವ ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯಿಂದ ಸುಮಾರು 25 ರಿಂದ 59 ಲಕ್ಷ ಬ್ಯಾರೆಲ್ ತೈಲ ನಾಶವಾಗಿದೆ. ಇದರಿಂದ ವಿಷಕಾರಿ ಆಸಿಡ್ ಮಳೆ ಉಂಟಾಗಿದ್ದು, ಲಕ್ಷಾಂತರ ಜನರು ಮಾಲಿನ್ಯಕ್ಕೆ ತುತ್ತಾಗಿದ್ದಾರೆ. ಇದು ಸುಮಾರು 18.8 ಲಕ್ಷ ಟನ್ ಮಾಲಿನ್ಯಕ್ಕೆ ಕಾರಣವಾಗಿದೆ.
-
ಬೃಹತ್ ಯುದ್ಧ ವಿಮಾನಗಳು ಮತ್ತು ನೌಕೆಗಳು: ಪಶ್ಚಿಮ ಇಂಗ್ಲೆಂಡ್‌ನಂತಹ ದೂರದ ನೆಲೆಗಳಿಂದ ಹಾರಿಬರುವ ಅಮೆರಿಕದ ಭಾರಿ ಬಾಂಬರ್ ವಿಮಾನಗಳು ಲಕ್ಷಾಂತರ ಲೀಟರ್ ಇಂಧನವನ್ನು ಬಳಸುತ್ತಿವೆ. ಕೇವಲ 14 ದಿನಗಳಲ್ಲಿ ಸುಮಾರು 15 ರಿಂದ 27 ಕೋಟಿ ಲೀಟರ್ ಇಂಧನ ಬಳಕೆಯಾಗಿದ್ದು, ಇದರಿಂದ 5.29 ಲಕ್ಷ ಟನ್ ಮಾಲಿನ್ಯ ಉಂಟಾಗಿದೆ.
-
ಮಿಲಿಟರಿ ಉಪಕರಣಗಳ ನಾಶ: ಯುದ್ಧದಲ್ಲಿ ನಾಶವಾದ ವಿಮಾನಗಳು, ನೌಕೆಗಳು ಮತ್ತು ಕ್ಷಿಪಣಿ ಲಾಂಚರ್‌ಗಳಿಂದಲೂ ಅಪಾರ ಪ್ರಮಾಣದ ಕಾರ್ಬನ್ ಹೊರಹೊಮ್ಮಿದೆ. ಇರಾನ್ 28 ವಿಮಾನಗಳು ಮತ್ತು 21 ನೌಕೆಗಳನ್ನು ಕಳೆದುಕೊಂಡರೆ, ಅಮೆರಿಕ 4 ವಿಮಾನಗಳನ್ನು ಕಳೆದುಕೊಂಡಿದೆ.
ತಜ್ಞರ ಆತಂಕ:
“ಪ್ರತಿ ಕ್ಷಿಪಣಿ ದಾಳಿಯು ಈ ಭೂಮಿಯನ್ನು ಮತ್ತಷ್ಟು ಬಿಸಿಯಾಗಿಸುತ್ತಿದೆ ಮತ್ತು ಅಸ್ಥಿರಗೊಳಿಸುತ್ತಿದೆ” ಎಂದು ಕ್ಲೈಮೇಟ್ ಅಂಡ್ ಕಮ್ಯುನಿಟಿ ಇನ್ಸ್ಟಿಟ್ಯೂಟ್‌ನ ಸಂಶೋಧನಾ ನಿರ್ದೇಶಕ ಪ್ಯಾಟ್ರಿಕ್ ಬಿಗ್ಗರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಳೆಯುಳಿಕೆ ಇಂಧನ ಆಧಾರಿತ ಭೌಗೋಳಿಕ ರಾಜಕೀಯವು ವಾಸಯೋಗ್ಯ ಭೂಮಿಗೆ ಪೂರಕವಾಗಿಲ್ಲ ಎಂಬುದಕ್ಕೆ ಈ ಯುದ್ಧವೇ ದೊಡ್ಡ ನಿದರ್ಶನ ಎಂದಿದ್ದಾರೆ.
ವರದಿಯ ಪ್ರಕಾರ, ಇತ್ತೀಚೆಗೆ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ಯುದ್ಧಗಳು ಸಹ ಈಗಾಗಲೇ ಸುಮಾರು 3.3 ಕೋಟಿ ಟನ್ ಮಾಲಿನ್ಯವನ್ನು ಸೃಷ್ಟಿಸಿವೆ ಎಂದು ಅಂದಾಜಿಸಲಾಗಿದೆ.
BREAKING: ಇಸ್ರೇಲ್ ಭೀಕರ ವೈಮಾನಿಕ ದಾಳಿ: ಲೆಬನಾನ್ ನಲ್ಲಿ ಹಿಜ್ಬುಲ್ಲಾದ ಕಮಾಂಡರ್ ಸೇರಿ ಮೂವರು ಉಗ್ರರ ಹತ್ಯೆ
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








