ಬೆಂಗಳೂರು: ಸರ್ಕಾರ ಮಂಜೂರು ಮಾಡಿರುವ ಜಮೀನುಗಳಿಗೆ ಸರ್ಕಾರವೇ ಪೋಡಿ (ಜಮೀನಿನ ಸರ್ವೆ ಮತ್ತು ದಾಖಲೆ ಪ್ರಕ್ರಿಯೆ) ಮಾಡಿಕೊಡುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಕಳೆದ ಒಂದು ವರ್ಷದಲ್ಲಿ ಒಟ್ಟು 2.16 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಪೋಡಿ ಮಾಡಲು ಆದೇಶಿಸಲಾಗಿದೆ.
ಸದ್ಯ 5,70,116 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1.60 ಲಕ್ಷ ಅರ್ಜಿಗಳು ಪಹಣಿ ತಿದ್ದುಪಡಿಯಾಗಿ ತಾಲೂಕು ಕಚೇರಿಗಳಲ್ಲಿ ಪರಿಶೀಲನಾ ಹಂತದಲ್ಲಿವೆ. ಉಳಿದ 4.09 ಲಕ್ಷ ಅರ್ಜಿಗಳು ಭೂಮಾಪನ ಇಲಾಖೆಯ ವಿವಿಧ ಹಂತಗಳಲ್ಲಿ ಬಾಕಿ ಇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60,943 ಅರ್ಜಿಗಳ ಪೋಡಿಗೆ ಆದೇಶಿಸಲಾಗಿದ್ದು, ಈ ಪೈಕಿ 23,621 ಅರ್ಜಿಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಅರ್ಜಿಗಳನ್ನು ಡಿಸೆಂಬರ್ ಒಳಗೆ ಮುಗಿಸುವ ಭರವಸೆ ನೀಡಲಾಗಿದೆ. ಭೂಮಾಪನ ಕಾರ್ಯವನ್ನು ಚುರುಕುಗೊಳಿಸಲು ಭೂಮಾಪಕರಿಗೆ ಹಂತ-ಹಂತವಾಗಿ ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ. ಈಗಾಗಲೇ 590 ರೋವರ್‌ಗಳನ್ನು ವಿತರಿಸಲಾಗಿದೆ ಎಂದರು.
ಸ್ವಯಂಚಾಲಿತ ಖಾತೆ ಬದಲಾವಣೆ (Auto Mutation)
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮತ್ತು ವಿಳಂಬವನ್ನು ತಡೆಯಲು ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್‌ನ ರಾಮೋಜಿಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸ್ತಿ ನೋಂದಣಿಯಾದ ತಕ್ಷಣ ಖಾತೆಗಳು ಸ್ವಯಂಚಾಲಿತವಾಗಿ ಬದಲಾವಣೆಯಾಗುವ ‘ಆಟೋ ಮ್ಯುಟೇಷನ್’ ವ್ಯವಸ್ಥೆ ಜಾರಿಯಲ್ಲಿದೆ ಎಂದರು. ಪ್ರಸ್ತುತ ಶೇ. 98ರಷ್ಟು ಖಾತೆಗಳು ಇದೇ ಮಾದರಿಯಲ್ಲಿ ಬದಲಾಗುತ್ತಿವೆ ಎಂದು ಅವರು ತಿಳಿಸಿದರು.








