ಶಿವಮೊಗ್ಗ: ಸಾಗರದ ಅಧಿದೇವತೆ ಎಂದೇ ಪ್ರಸಿದ್ಧವಾಗಿರುವ ಶ್ರೀ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವವು ಈ ವರ್ಷ ಮಾರ್ಚ್ 22ರಿಂದ ಮಾರ್ಚ್ 27ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಅವರು, ಸಾಗರದ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವವು ಮಾರ್ಚ್ 22 ರಿಂದ 27 ರವರೆಗೆ ನಡೆಯಲಿದ್ದು, ಮಾರ್ಚ್ 19 ರಂದು ಯುಗಾದಿ ಹಬ್ಬದ ದಿನದಂದೇ ಕಂಕಣ ಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ ಎಂದರು.
ಸಾಗರದ ಮಹಾಗಣಪತಿ ಮಹಾರಥೋತ್ಸವ ಯಾವಾಗ?
ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವವು ಮಾರ್ಚ್.22ರಂದು ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.
ವ್ಯವಸ್ಥಿತ ತಯಾರಿ
ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಈಗಾಗಲೇ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಜಾತ್ರೆಯ ಸುಗಮ ನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿ ಸಮಿತಿಗೂ ಸಂಚಾಲಕರನ್ನು ನೇಮಿಸಲಾಗಿದೆ ಅಂತ ಇಓ ಪ್ರಮಿಳಾ ಕುಮಾರ್ ತಿಳಿಸಿದ್ದಾರೆ.
ಭಕ್ತರಿಗೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ
ಈ ಹಿಂದೆ ನಡೆದ ಮಾರಿ ಜಾತ್ರೆಯ ಸಂದರ್ಭದಲ್ಲಿ ಉಂಟಾಗಿದ್ದ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಭಕ್ತರಿಗೆ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿ ನೇಮಕ, ಬ್ಯಾರಿಕೇಡ್ ವ್ಯವಸ್ಥೆ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾಗರ ಸಮುದಾಯದ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಲು ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನದ ಇಓ ಪ್ರಮಿಳಾ ಕುಮಾರಿ ವಿನಂತಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








