ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಈ ಹಿಂದೆ 11.67 ಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಈಗ ಆ ಒಂದು ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರು ಸಮಿತಿ ಒಂದನ್ನು ರಚಿಸಿ ಮರು ತನಿಖೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು 2021ರಿಂದ 4 ವರ್ಷಗಳ ವರೆಗೆ ಅಂಕಪಟ್ಟಿ ನೀಡದೆ, ಭೌತಿಕ ಅಂಕಪಟ್ಟಿಗಳನ್ನು ಮುದ್ರಿಸಿ ವಿಶ್ವವಿದ್ಯಾನಿಲಯಕ್ಕೆ ಒಟ್ಟಾರೆ 11.67 ಕೋಟಿ ರೂ. ಆರ್ಥಿಕ ನಷ್ಟವನ್ನುಂಟು ಮಾಡಿರುವುದು ಗುಲ್ಬರ್ಗಾ ವಿವಿಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆಗಾಗಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ನೇತೃತ್ವದಲ್ಲಿ ಏಕವ್ಯಕ್ತಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದಾರೆ. ಈ ಮೂಲಕ ವಿವಿಯಲ್ಲಿನ ಕೋಟ್ಯಂತರ ಹಣ ಲೂಟಿ ಪ್ರಕರಣದ ತನಿಖೆ ಮತ್ತೆ ಆರಂಭವಾಗಿದೆ.
ಏನಿದು 11.67 ಕೋಟಿ ಹಗರಣ?
2024ರ ವೇಳೆಯಲ್ಲಿನ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಅವರು ಗುಲ್ಬರ್ಗಾ ವಿವಿಗೆ ಭೇಟಿ ನೀಡಿ, 2021 ರಿಂದ ನಾಲ್ಕು ವರ್ಷಗಳ ಕಾಲ ವಿಲೇವಾರಿ ಮಾಡದ ಅಂಕಪಟ್ಟಿ ಹಾಗೂ ಕಾನ್ವೆಕೇಶನ್ ಗಳ ಮನವಿ ಪತ್ರಗಳನ್ನು ನೋಡಿ ದಂಗಾಗಿದ್ದರು. ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದರು. ಈ ಕುರಿತು ಉನ್ನತ ತನಿಖೆಗೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಪಿಡ್ಡಪ್ಪ ಜಾಲಗಾರ ಅವರು ಆಗಿನ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯು ವಿವಿಯ ಕುಲಸಚಿವರಿಗೆ ಪತ್ರ ಬರೆದು ಮಾಹಿತಿ ಕೇಳಿತ್ತು.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದ ಕುಲಸಚಿವರು, ಹಣಕಾಸು ವಿಭಾಗದಿಂದ 2021ರಿಂದ 2024ರವರೆಗೆ ಅಂಕಪಟ್ಟಿಗಳ ಸರಬರಾಜು ಮತ್ತು ಮುದ್ರಣಕ್ಕಾಗಿ ಒಟ್ಟು 11,67,74,305 ರೂ. (11.67 ಕೋಟಿ) ನಷ್ಟವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.ಅದರ ಜೊತೆಗೆ ಪರೀಕ್ಷಾ ವಿಭಾಗದಲ್ಲಿ 202 ರಲ್ಲಿ 2,42,88,000 ರೂ., 2022ರಲ್ಲಿ 3,58,98,000ರೂ. 2024ರಲ್ಲಿ ಎನ್ಇಪಿ ಬ್ಯಾಚಿಗೆ ಬೇಕಾದ UUAOS ಮಾದರಿ ಅಂಕಪಟ್ಟಿಗೆ 4 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.








