ಜೆರುಸಲೆಮ್: ಇರಾನ್ ನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್ನ ನೂತನ ‘ಸುಪ್ರೀಂ ಲೀಡರ್’ (ಸರ್ವೋಚ್ಚ ನಾಯಕ) ಎಂದು ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆಯೇ ಇರಾನ್ ಈ ನಿರ್ಧಾರ ಕೈಗೊಂಡಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
88 ಧರ್ಮಗುರುಗಳನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ ಸಭೆ ಸೇರಿ ಮೊಜ್ತಾಬಾ ಅವರನ್ನು ಇರಾನ್ನ ಮೂರನೇ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ. ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಅವರು ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿ ಈಗ ಮೊಜ್ತಾಬಾ ಅಧಿಕಾರ ವಹಿಸಿಕೊಂಡಿದ್ದಾರೆ.
ಮೊಜ್ತಾಬಾ ಅವರು ಇರಾನ್ನ ಭದ್ರತಾ ಪಡೆಗಳು ಮತ್ತು ಪ್ರಬಲ ವ್ಯಾಪಾರ ಜಾಲಗಳ ಮೇಲೆ ಮೊದಲಿನಿಂದಲೂ ಹೆಚ್ಚಿನ ಹಿಡಿತ ಹೊಂದಿದ್ದಾರೆ.
ಮೊಜ್ತಾಬಾ ಅವರ ಈ ನೇಮಕವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. “ಇರಾನ್ನ ನಾಯಕನ ಆಯ್ಕೆಯಲ್ಲಿ ವಾಷಿಂಗ್ಟನ್ನ ಸಹಮತವೂ ಇರಬೇಕು. ನಮ್ಮ ಅನುಮೋದನೆ ಇಲ್ಲದಿದ್ದರೆ ಅವರು ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಟ್ರಂಪ್ ಎಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಖಡಕ್ ಆಗಿ ಹೇಳಿದ್ದಾರೆ.
ಸಂಘರ್ಷದ ಸದ್ಯದ ಸ್ಥಿತಿ:
ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಇರಾನ್ ನಡೆಸಿದ ಪ್ರತಿ-ದಾಳಿಯಿಂದಾಗಿ ಈವರೆಗೆ ಒಟ್ಟು ಏಳು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಸೇನೆ ಖಚಿತಪಡಿಸಿದೆ.








