ಸಾಮಾನ್ಯವಾಗಿ ಮನೆಯಲ್ಲಿ ಪೋಷಕರು “ಅಗತ್ಯವಿಲ್ಲದಿದ್ದರೆ ಲೈಟ್ ಆಫ್ ಮಾಡು”, “ಎಸಿ ಬಂದ್ ಮಾಡು” ಎಂದು ಹೇಳುತ್ತಿರುತ್ತಾರೆ. ತಿಂಗಳ ಕೊನೆಯಲ್ಲಿ ಬರುವ ಕರೆಂಟ್ ಬಿಲ್ ನೋಡಿ ಅವರಿಗೆ ಆಗುವ ಆತಂಕವೇ ಇದಕ್ಕೆ ಕಾರಣ. ಅನಗತ್ಯವಾಗಿ ವಿದ್ಯುತ್ ಬಳಸದಿದ್ದರೆ ಬಿಲ್ ಕಡಿಮೆ ಬರುತ್ತದೆ ಎಂಬುದು ನಿಜ. ಆದರೆ ನಮಗೆ ಅರಿವಿಲ್ಲದಂತೆಯೇ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಅಥವಾ ಅಭ್ಯಾಸಗಳು ವಿದ್ಯುತ್ ಬಿಲ್ ಅನ್ನು ದುಪ್ಪಟ್ಟುಗೊಳಿಸುತ್ತವೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಈ ಅಭ್ಯಾಸಗಳನ್ನು ಬದಲಿಸಿಕೊಂಡರೆ ಬಿಲ್ ಮೊತ್ತವನ್ನು ಗಣನೀಯವಾಗಿ ಇಳಿಸಬಹುದು.
ಹಾಗಾದರೆ ಬಿಲ್ ಹೆಚ್ಚಾಗಲು ಕಾರಣವಾಗುವ ಆ ಅಭ್ಯಾಸಗಳು ಯಾವುವು? ಇಲ್ಲಿದೆ ಮಾಹಿತಿ:
1. ಎಸಿಯನ್ನು ಅತೀ ಕಡಿಮೆ ತಾಪಮಾನದಲ್ಲಿ ಇಡುವುದು
ಅನೇಕರು ಬೇಗ ತಂಪಾಗಲಿ ಎಂಬ ಕಾರಣಕ್ಕೆ ಎಸಿಯನ್ನು 16 ಡಿಗ್ರಿ ಸೆಲ್ಸಿಯಸ್‌ಗೆ ಸೆಟ್ ಮಾಡುತ್ತಾರೆ. ಇದು ವಿದ್ಯುತ್ ಬಿಲ್ ಮೇಲೆ ನೇರ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಎಸಿಯನ್ನು 22 ರಿಂದ 24 ಡಿಗ್ರಿ ನಡುವೆ ಇಡುವುದು ಅತ್ಯಂತ ಸೂಕ್ತ. ಇದರಿಂದ ಎಸಿ ಕಂಪ್ರೆಸರ್ ಮೇಲೆ ಒತ್ತಡ ಕಡಿಮೆಯಾಗಿ ವಿದ್ಯುತ್ ಉಳಿತಾಯವಾಗುತ್ತದೆ.
2. ಉಪಕರಣಗಳನ್ನು ‘ಸ್ಟ್ಯಾಂಡ್‌ಬೈ’ ಮೋಡ್‌ನಲ್ಲಿ ಬಿಡುವುದು
ನಮಗೆ ಉಪಕರಣಗಳನ್ನು ರಿಮೋಟ್ ಮೂಲಕ ಆಫ್ ಮಾಡಿ, ಮೇನ್ ಸ್ವಿಚ್ ಆನ್ ಬಿಡುವ ಅಭ್ಯಾಸವಿರುತ್ತದೆ. ಇದನ್ನು ‘ಸ್ಟ್ಯಾಂಡ್‌ಬೈ ಮೋಡ್’ ಎನ್ನಲಾಗುತ್ತದೆ. ಸೆಟ್-ಟಾಪ್ ಬಾಕ್ಸ್, ಎಸಿ, ಗೀಸರ್, ಆರ್‌ಒ (RO) ಮತ್ತು ಫ್ಯಾನ್‌ಗಳ ಸ್ವಿಚ್ ಆಫ್ ಮಾಡದಿದ್ದರೆ, ಅವು ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಅನ್ನು ಬಳಸುತ್ತಲೇ ಇರುತ್ತವೆ. ಇದು ತಿಂಗಳ ಅಂತ್ಯದಲ್ಲಿ ಬಿಲ್ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.
3. ಅನಗತ್ಯವಾಗಿ ಲೈಟ್ ಮತ್ತು ಫ್ಯಾನ್ ಚಾಲನೆಯಲ್ಲಿಡುವುದು
ಗೊತ್ತಿದ್ದೂ ಮಾಡುವ ಕೆಲವು ತಪ್ಪುಗಳು ಬಿಲ್ ಅನ್ನು ದ್ವಿಗುಣಗೊಳಿಸುತ್ತವೆ. ಉದಾಹರಣೆಗೆ: ವಾಶ್‌ರೂಮ್‌ಗೆ ಹೋಗಿ ಬಂದ ನಂತರ ಲೈಟ್ ಬಂದ್ ಮಾಡದಿರುವುದು.
ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಫ್ಯಾನ್ ಮತ್ತು ಲೈಟ್ ಆಫ್ ಮಾಡುವುದನ್ನು ಮರೆಯುವುದು.
4. ಹಳೆಯ ಉಪಕರಣಗಳ ಬಳಕೆ
ತುಂಬಾ ಹಳೆಯದಾದ ಫ್ರಿಜ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು ಹೊಸ ಮಾಡೆಲ್ ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತವೆ. ಇವುಗಳ ಸರಿಯಾದ ನಿರ್ವಹಣೆ (Service) ಮಾಡದಿದ್ದರೂ ಬಿಲ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ.








