ಶಿವಮೊಗ್ಗ : ಶಿವಮೊಗ್ಗದಲ್ಲಿ ನಿವೃತ್ತ ನೌಕರನ ಬಳಿ 1 ಲಕ್ಷ ಸ್ವೀಕರಿಸುವ ವೇಳೆ ಬಿಇಓ ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.ತಮ್ಮ ಕಚೇರಿಯ ನಿವೃತ್ತ ನೌಕರನ ವಾರ್ಷಿಕ ಬಡ್ತಿ ಮತ್ತು ಭತ್ಯೆ ನೀಡಲು 4 ಲಕ್ಷ ರೂ ಲಂಚದ ಬೇಡಿಕೆಯಲ್ಲಿ 1 ಲಕ್ಷ ರೂ ಹಣ ಪಡೆಯುವಾಗ ಭದ್ರಾವತಿಯ ಬಿಇಓ ನಾಗೇಂದ್ರ ಎ.ಕೆ ಸೇರಿದಂತೆ ಖಾಸಗಿ ವ್ಯಕ್ತಿ ಮಂಜುನಾಥ್ ಎಂಬವರು ಶಿವಮೊಗ್ಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಲಿಂಗರಾಜು ಅವರು 2011ರಿಂದ 2023ರ ತನಕ ಶಿಕ್ಷಣ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಅನೇಕ ಬಾರಿ ತಮ್ಮ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಬಿಇಓ ನಾಗೇಂದ್ರಪ್ಪ ಎ.ಕೆ ಅವರು ಹಾಗೂ ಮಧ್ಯವರ್ತಿ ಮಂಜುನಾಥ್ ಅವರು ಸೇರಿ ಲಿಂಗರಾಜು ಅವರಿಗೆ ಬರಬೇಕಾದ ಎಲ್ಲಾ ಹಣವನ್ನು ಮಾಡಿಕೊಡಲು 4 ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಲಿಂಗರಾಜು ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನಂತೆ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದರು. ಬಿಇಓ ಕಚೇರಿಯ ಕೊಠಡಿಯಲ್ಲಿ ನಾಗೇಂದ್ರಪ್ಪ ಹಾಗೂ ಮಧ್ಯವರ್ತಿ ಮಂಜುನಾಥ್ ಅವರು ಲಿಂಗರಾಜು ಅವರಿಂದ ಸೋಮವಾರ ಒಂದು ಲಕ್ಷ ರೂ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ಅವರು ತನಿಖೆ ಕೈಗೊಂಡಿದ್ದಾರೆ.








