ಮಂಡ್ಯ :- ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7 ನೇ ರಸ್ತೆಯ ಮನೆಯೊಂದರಲ್ಲಿ ಕಳ್ಳತನವಾಗಿದ್ದು 1.5 ಲಕ್ಷ ರೂ ನಗದು ಸೇರಿದಂತೆ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ.
ಸೌಮ್ಯ ಮಹೇಶ್ ಎಂಬುವವರ ಮನೆಯಲ್ಲೇ ಕಳ್ಳತನವಾಗಿದ್ದು,ಮನೆಯವರು ಸೋಮವಾರ ಸಂಬಂಧಿಕರ ಊರಿಗೆ ಹೋಗಿ ಮಂಗಳವಾರ ರಾತ್ರಿ 10 ಗಂಟೆಗೆ ವಾಪಸ್ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಯ ಗೇಟ್ ನ ಬೀಗ ಹೊಡೆದು ನಂತರ ಮುಂಬಾಗಿಲಿನ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಮನೆಯ ಒಳಹೋಗಿ ರೂಮಿನ ಬೀರುವಿನಲ್ಲಿದ್ದ 148 ಗ್ರಾಂ ತೂಕದ ಚಿನ್ನಾಭರಣ, 1.5ಲಕ್ಷ ರೂ ನಗದು ಹಾಗೂ ದೇವರ ಮನೆಯಲ್ಲಿದ್ದ ಸುಮಾರು 2.5 ಕೆ. ಜಿ ತೂಕದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದoತೆಯೇ ಸ್ಥಳಕ್ಕೆ ಸಿಪಿಐ ಗಳಾದ ನವೀನ್ ಕುಮಾರ್, ನಾರಾಯಣಿ, ಪಿಎಸ್ಐ ಗಳಾದ ಮಂಜುನಾಥ್, ರವಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು.
ಮನೆಯ ಮಾಲೀಕರಾದ ಸೌಮ್ಯ ಮಹೇಶ್ ರವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮದ್ದೂರು ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ








