ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಉದ್ದೇಶಿತ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯನ್ನು ವಿರೋಧಿಸಿ ಮೇ 7ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಪತ್ರ ವ್ಯವಹಾರದ ಪ್ರತಿಗಳನ್ನು ಅಧಿಕಾರಿಗಳು ಒದಗಿಸಬೇಕು, ಇಲ್ಲವಾದರೆ ಕಾನೂನುಭಂಗ ಚಳವಳಿ ಕೈಗೊಳ್ಳಬೇಕಾಗುತ್ತದೆ ಎಂದು ಮಲೆನಾಡು ರೈತ ಹೋರಾಟ ವೇದಿಕೆಯ ಅಧ್ಯಕ್ಷ ತೀ.ನ.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಪತ್ರ ವ್ಯವಹಾರದ ದಾಖಲೆಗಳ ಬಹಿರಂಗಕ್ಕೆ ಆಗ್ರಹ
ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದಲೇ ಅಣು ಸ್ಥಾವರ ನಿರ್ಮಾಣದ ಕುರಿತು ಪತ್ರವ್ಯವಹಾರಗಳು ನಡೆಯುತ್ತಿದ್ದರೂ, ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೇ 7ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕೇವಲ ಜನಾಂದೋಲನ ಮಾತ್ರವಲ್ಲದೆ, ಅಣು ಸ್ಥಾವರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಾಖಲೆಗಳನ್ನು ಒದಗಿಸದಿದ್ದಲ್ಲಿ ಅಧಿಕಾರಿಗಳ ಕಚೇರಿಗೆ ನುಗ್ಗಲು ತಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
ಯೋಜನೆಯ ಕುರಿತು ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಮೌನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಣು ಸ್ಥಾವರದ ಜಾಗ ಸ್ವಾಧೀನಪಡಿಸಿಕೊಳ್ಳುವಾಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ನೀಡಿರುವ ಹಕ್ಕುಪತ್ರಗಳು ವಜಾಗೊಳ್ಳಲಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಉಸ್ತುವಾರಿ ಸಚಿವರ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಯೋಜನೆಯ ಬಗ್ಗೆ ಮೊದಲೇ ಮಾಹಿತಿ ಇತ್ತೇ ಅಥವಾ ಇಂತಹ ಬೃಹತ್ ಯೋಜನೆಯನ್ನು ಅಧಿಕಾರಿಗಳು ಅವರ ಗಮನಕ್ಕೂ ತಂದಿರಲಿಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಳುಗಡೆ ಸಂತ್ರಸ್ತರ ಜೀವನ್ಮರಣದ ಹೋರಾಟ
ಈ ಹೋರಾಟವು ಕೇವಲ ಪ್ರತಿಭಟನೆಯಲ್ಲ, ಬದಲಿಗೆ ಮುಳುಗಡೆ ಸಂತ್ರಸ್ತರ ಜೀವನ್ಮರಣದ ಹೋರಾಟವಾಗಿದೆ. ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಲು ಕೂಡ ನಾವು ಸಿದ್ಧರಿದ್ದೇವೆ ಎಂದು ಅವರು ದೃಢವಾಗಿ ಹೇಳಿದ್ದಾರೆ. ಅಲ್ಲದೆ, ಮೇ 7ರಂದು ನಡೆಯುವ ಈ ಹೋರಾಟದಲ್ಲಿ ಸಾರ್ವಜನಿಕರು ಹಾಗೂ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದವರು
ಈ ಸುದ್ದಿಗೋಷ್ಠಿಯಲ್ಲಿ ಮಲೆನಾಡು ರೈತ ಹೋರಾಟ ವೇದಿಕೆಯ ಪ್ರಮುಖರಾದ ದಯಾನಂದ, ಮಂಜಪ್ಪ ಆರನಬೈಲು, ಅಶೋಕ್ ಜಂಬಳ್ಳಿ, ಕೆ.ಎಸ್. ದರ್ಶನ್ ಹಾಗೂ ಮಹೇಶ್ ಉಪಸ್ಥಿತರಿದ್ದರು.
ಸಾಗರದ ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ: ಶಿವಮೊಗ್ಗ DC ಸ್ಪಷ್ಟನೆ
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಪ್ರಧಾನಿ ಮೋದಿ ಭಾಷಣದ ಸಂಪೂರ್ಣ ಹೈಲೈಟ್ಸ್ ಇಲ್ಲಿದೆ | PM Modi Speech








