ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ವಸತಿ ಸೌಲಭ್ಯ ವಿಸ್ತರಣೆ ಹಾಗೂ ಭವಿಷ್ಯದ ಸಾರ್ವಜನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಮಂಡ್ಯ ತಹಸಿಲ್ದಾರ್ ರವರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ದೇಶನಗಳನ್ನು ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ 5,000 ನಿವೇಶನಗಳನ್ನು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ, ವಸತಿ ರಹಿತ ಕುಟುಂಬಗಳಿಗೆ ಸ್ವಂತ ನಿವೇಶನ ಒದಗಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ತಂಗಳಗೆರೆ ಹಾಗೂ ಹೊನಗನಹಳ್ಳಿ ಗ್ರಾಮಗಳಲ್ಲಿ ನಿವೇಶನ ಹಂಚಿಕೆಗೆ ಅಗತ್ಯವಾದ ಟೌನ್ ಪ್ಲಾನಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಲಾಯಿತು.
ಇದೇ ವೇಳೆ ಹುಲಿವಾನ ಹಾಗೂ ಬಸರಾಳು ಗ್ರಾಮಗಳಲ್ಲಿ ನಿವೇಶನ ವಿತರಣೆಗೆ ಸಂಬಂಧಿಸಿದ ಹಕ್ಕುಪತ್ರಗಳ ತಿದ್ದುಪಡಿ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮಂಡ್ಯ ನಗರ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರ ವಸತಿ ಸಮಸ್ಯೆ ನಿವಾರಣೆಗೆ ಅಪಾರ್ಟ್ಮೆಂಟ್ ಮಾದರಿಯ ಸರ್ಕಾರಿ ಕ್ವಾಟರ್ಸ್ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಗುರುತಿಸುವಂತೆ ಸೂಚಿಸಿದ ಶಾಸಕ, ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಮುದ್ದನಘಟ್ಟ ಹಾಗೂ ಹೆಗ್ಗಡತಹಳ್ಳಿ ಗ್ರಾಮಗಳಲ್ಲಿ ಕೈಗಾರಿಕಾ ವಲಯಕ್ಕಾಗಿ ಭೂಮಿಯನ್ನು ಗುರುತಿಸಿ ಮೀಸಲಿಡುವಂತೆ, ಜೊತೆಗೆ ಸ್ಥಳದಲ್ಲಿ ನಾಮಫಲಕ ಅಳವಡಿಸುವ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಂಬದಳ್ಳಿ ಗ್ರಾಮದಲ್ಲಿ ಶ್ರಮಿಕರ ಶಾಲೆ ಸ್ಥಾಪನೆಗೆ ಅಗತ್ಯ ಜಾಗವನ್ನು ಗುರುತಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಕ್ಷೇತ್ರದ ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗೋಮಾಳ ಜಮೀನುಗಳನ್ನು ಸಮಗ್ರವಾಗಿ ಗುರುತಿಸಿ, ಮುಂದಿನ 30 ವರ್ಷಗಳ ದೀರ್ಘಾವಧಿಯ ಸಾರ್ವಜನಿಕ ಸೇವಾ ಯೋಜನೆಗಳಿಗೆ ಸಂರಕ್ಷಿಸುವ ಕಾರ್ಯಯೋಜನೆ ರೂಪಿಸಬೇಕು ಎಂದು ಶಾಸಕರು ಸೂಚಿಸಿದರು.
ಇದಲ್ಲದೆ, ಆಶ್ರಯ ಯೋಜನೆಯಡಿ ಹುನುಗನಹಳ್ಳಿ, ಗಣಿಗ, ಕೆರಗೋಡು, ಮಾರಗೌಡನಹಳ್ಳಿ ಹಾಗೂ ತುಂಬಕೆರೆ ಗ್ರಾಮಗಳಲ್ಲಿ 10 ರಿಂದ 20 ಎಕರೆವರೆಗೆ ಲಭ್ಯವಿರುವ ಗೋಮಾಳ, ಖರಾಬು ಹಾಗೂ ಇತರೆ ಸರ್ಕಾರಿ ಭೂಮಿಯನ್ನು ವಸತಿ ಯೋಜನೆಗಳಿಗಾಗಿ ಕಾಯ್ದಿರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಕ್ರಮ ಭೂ ಒತ್ತುವರಿಗಳ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ ಶಾಸಕ, ಸರ್ಕಾರಿ ಜಮೀನಿನ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಮಾತನಾಡಿದ ಅವರು, PDO, RI ಹಾಗೂ ಗ್ರಾಮ ಆಡಳಿತಾಧಿಕಾರಿಗಳು (VA) ಪಾರದರ್ಶಕವಾಗಿ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಸಮಸ್ಯೆಗಳನ್ನು ತ್ವರಿತವಾಗಿ ಪರಿಷ್ಕರಿಸಬೇಕು.
ಅನಾವಶ್ಯಕವಾಗಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
“ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪ ನಮ್ಮದು. ಅಭಿವೃದ್ಧಿ, ಉತ್ತಮ ಆಡಳಿತ ಹಾಗೂ ಜನಸೇವೆ ಎಂಬ ಮೂರು ಗುರಿಗಳನ್ನು ಸಾಧಿಸಲು ಎಲ್ಲಾ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು” ಎಂದು ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಕರೆ ನೀಡಿದರು.








