ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 175 ಅಂಗಡಿಗಳು ಇರುವ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ.
ಕಟ್ಟಡದ ಮೊದಲ ಮಹಡಿಯಲ್ಲಿ ಫ್ಯಾನ್ಸಿ ಸ್ಟೋರ್, ಪ್ಲಾಸ್ಟಿಕ್ ಅಂಗಡಿ ಇವೆಲ್ಲ ಕೂಡ ಹೊತ್ತಿ ಉರಿಯುತ್ತಿವೆ. ವಿನೋದ್ ಎಂಬವರಿಗೆ ಈ ಒಂದು ಕಟ್ಟಡ ಸೇರಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಇಡೀ ಏರಿಯಾದಲ್ಲಿ ದಟ್ಟ ಹೊಗೆ ಆವರಿಸಿದೆ. 5 ಅಗ್ನಿಶಾಮಕ ವಾಹನ ದಳ ಸಿಬ್ಬಂದಿಗಳು ಸಹ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಸಹ ಭೇಟಿ ನೀಡಿದ್ದಾರೆ.
ಇದೇ ವೇಳೆ ಬೆಂಕಿ ನಂದಿಸುವ ಸಂದರ್ಭದಲ್ಲಿ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ಬೆಂಕಿ ತಗುಲಿದೆ. ಸದ್ಯ ಒಟ್ಟು ಆರು ಅಗ್ನಿಶಾಮಕ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಟ್ಟ ಹೊಗೆಯಿಂದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಅಲ್ಲದೆ ಕಾರ್ಯಾಚರಣೆ ವೇಳೆ ಸಣ್ಣ ಪ್ರಮಾಣದಲ್ಲಿ ಬೆಂಕಿ ತಗುಲಿದೆ. ಚಿಕ್ಕಪೇಟೆ ಆರೋಗ್ಯ ವೈದ್ಯಾಧಿಕಾರಿಗಳಿಂದ ಸಿಬ್ಬಂದಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.








