ಧಾರವಾಡ : ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಇಂದು ಧಾರವಾಡದಲ್ಲಿ ಉದ್ಯೋಗ ಆಕಾಂಕ್ಷಿಗಳು ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಇದೀಗ ಈ ಒಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ಮಧ್ಯ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕಾಂತಕುಮಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀನಗರದಿಂದ ವಿದ್ಯಾರ್ಥಿಗಳು ಓಡೋಡಿ ಬಂದಿದ್ದಾರೆ. ಸರ್ವಮಂಗಳ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ಜಮಾವಾಣಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಸಹ ಭಾಗಿಯಾಗಿದ್ದಾರೆ.
ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ವಿದ್ಯಾರ್ಥಿಗಳು ಜುಬ್ಳಿ ಸರ್ಕಲ್ ವರೆಗೆ ಹೋಗಲು ಪಟ್ಟು ಹಿಡಿದಿದ್ದಾರೆ.ಜಯನಗರ ಸರ್ಕಲ್ ನಲ್ಲಿ ವಿದ್ಯಾರ್ಥಿಗಳು ಬಿಗಿಪಟ್ಟು ಹಿಡಿದಿದ್ದಾರೆ ಸ್ವಲ್ಪ ತಡೆದು ಹೋಗೋಣ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಜಗ್ಗದೆ ಕೂಡಲೇ ಹೋಗಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನ ನಿರತ ವಿದ್ಯಾರ್ಥಿಗಳು ನಮಗೆ ಕರ್ನಾಟಕವನ್ನು ಇನ್ನೊಂದು ನೇಪಾಳ ಬಾಂಗ್ಲಾದೇಶ ಮಾಡೋಕೆ ಇಷ್ಟ ಇಲ್ಲ. ಹಾಗಾಗಿ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳಬೇಕು. ನಮ್ಮ ಕರ್ನಾಟಕ ವಿಧಾನಸಭಾದಲ್ಲಿ 224 ಏನು ಶಾಸಕರಿದ್ದಾರೊ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಅವರನ್ನೆಲ್ಲ ಬೀದಿಗೆ ತರುವುದು ನಮಗೆ ದೊಡ್ಡ ವಿಷಯವೇ ಅಲ್ಲ ಎಂದು ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳು ಎಚ್ಚರಿಕೆ ಕೊಟ್ಟಿದ್ದಾರೆ.








