ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ‘ಇ-ಸ್ವತ್ತು 2.0’ ತಂತ್ರಾಂಶದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಹೊಸ ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಹಾಗೂ ಖಾತೆ ಬದಲಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸುಲಭವಾಗಿ ನಡೆಯಲಿವೆ.
ತಂತ್ರಾಂಶದಲ್ಲಿ ತರಲಾದ ಪ್ರಮುಖ ಬದಲಾವಣೆಗಳು:
ಹೊಸ ಬಡಾವಣೆಗಳಿಗೆ ಅನುಮೋದನೆ: ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಸಲ್ಲಿಕೆಯಾದ 2,238 ಅರ್ಜಿಗಳಲ್ಲಿ 998 ಹೊಸ ಬಡಾವಣೆಗಳಿಗೆ ಪಂಚಾಯಿತಿ ಹಂತದಲ್ಲೇ ಅನುಮೋದನೆ ನೀಡಲಾಗಿದೆ.
ಖಾತೆ ಬದಲಾವಣೆ ಸುಲಭ: ನಮೂನೆ-11 ಬಿ ಖಾತೆಗಳನ್ನು ನಮೂನೆ-11 ಎ ಖಾತೆಗಳಾಗಿ ಪರಿವರ್ತಿಸಿಕೊಳ್ಳಲು ಈಗ ಗ್ರಾಮ ಪಂಚಾಯಿತಿ ಹಂತದಲ್ಲೇ ಅರ್ಜಿ ಸಲ್ಲಿಸಬಹುದು.
ಅಪಾರ್ಟ್ಮೆಂಟ್ಗಳಿಗೂ ಅವಕಾಶ: ಹೊಸ ಬಹುಮಹಡಿ ಕಟ್ಟಡಗಳ (ಅಪಾರ್ಟ್ಮೆಂಟ್) ಅರ್ಜಿಗಳನ್ನು ಸಲ್ಲಿಸಲು ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಅವಕಾಶ ಇರಲಿದೆ.
ವಿಸ್ತೀರ್ಣ ನಮೂದು ಸರಳೀಕರಣ: ಇ-ಸ್ವತ್ತು ತಂತ್ರಾಂಶದ ‘ಸಿಟಿಜನ್ ಇಂಟರ್ ಫೇಸ್’ ಮೂಲಕ ಅರ್ಜಿ ಸಲ್ಲಿಸುವಾಗ ಗುಂಟೆ ಮತ್ತು ಸೆಂಟ್ಸ್ಗಳಲ್ಲಿರುವ ವಿಸ್ತೀರ್ಣವನ್ನು ಚದರ ಮೀಟರ್ಗಳಿಗೆ (sq.m) ಪರಿವರ್ತಿಸಿ ಸುಲಭವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ: ತಂತ್ರಾಂಶದ ಮೂಲಕ ಋಣಭಾರ ಪ್ರಮಾಣಪತ್ರ (EC) ಸಲ್ಲಿಸುವಾಗ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಈಗ ಸಂಪೂರ್ಣವಾಗಿ ಬಗೆಹರಿಸಲಾಗಿದೆ.
ಈ ಬದಲಾವಣೆಗಳಿಂದಾಗಿ ಸಾರ್ವಜನಿಕರು ಆಸ್ತಿ ಸಂಬಂಧಿತ ಕೆಲಸಗಳಿಗಾಗಿ ತಾಲೂಕು ಅಥವಾ ಜಿಲ್ಲಾ ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ಪಾರದರ್ಶಕ ಮತ್ತು ವೇಗದ ಸೇವೆ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಇ – ಸ್ವತ್ತು 2.0 ತಂತ್ರಾಂಶದಲ್ಲಿ ತರಲಾದ ಬದಲಾವಣೆಗಳು ಹೀಗಿವೆ.. pic.twitter.com/65wv2npvHl
— DIPR Karnataka (@KarnatakaVarthe) May 4, 2026
ಇ- ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ತೀವ್ರಗೊಳಿಸಿದ್ದು, ಈವರೆಗೆ ಒಟ್ಟು 1,40,719 ಅರ್ಜಿಗಳನ್ನು ಅನುಮೋದಿಸಿ, ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. pic.twitter.com/z771XX7siR
— DIPR Karnataka (@KarnatakaVarthe) May 4, 2026








