ಮುಂಬೈ : ಕಳೆದ ವರ್ಷ ಬಾಲಿವುಡ್ ಸಿನಿಮಾ ಧುರಂಧರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಮಾರ್ಚ್ 20ರಂದು ಧುರಂಧರ್-2 ಸಿನಿಮಾ ರಿಲೀಸ್ ಆಗಲಿದ್ದು ಸಿನಿಮಾ ಬಿಡುಗಡೆಗೆ ಮುನ್ನವೇ ಇದೀಗ ನಟ ರಣವೀರ್ ಸಿಂಗ್ ಗೆ ಬೆದರಿಕೆ ಸಂದೇಶ ಬಂದಿದೆ..
ಹೌದು ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಬೆದರಿಕೆ ಸಂದೇಶ ಬಂದಿದೆ. ಅವರಿಂದ 10 ಕೋಟಿ ರೂಪಾಯಿ ಸುಲಿಗೆ ಮಾಡುವ ಉದ್ದೇಶದಿಂದ ಈ ರೀತಿ ಬೆದರಿಕೆ ಹಾಕಲಾಗಿದೆ. ಹಾಗಾಗಿ ರಣವೀರ್ ಸಿಂಗ್ ಅವರಿಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ.
ವರದಿಗಳ ಪ್ರಕಾರ, ರಣವೀರ್ ಸಿಂಗ್ ಅವರ ಮ್ಯಾನೇಜರ್ ವಾಟ್ಸಪ್ಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ ಮೂಲದ ಮೊಬೈಲ್ ಸಂಖ್ಯೆಯಿಂದ ಸಂದೇಶ ಕಳಿಸಿ ಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಇಂಥ ಪ್ರಕರಣಗಳು ಆಗಾಗ ನಡೆಯುತ್ತಿರುವುದರಿಂದ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಗಿದೆ.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಈ ಮೊದಲು ಅನೇಕ ಸೆಲೆಬ್ರಿಟಿಗಳಿಗೆ ಬೆದರಿಕೆ ಕರೆ ಬಂದಿತ್ತು. ಈ ಬಾರಿ ಕೂಡ ಅದೇ ಗ್ಯಾಂಗ್ನ ಸದಸ್ಯರಿಂದಲೇ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಸಂದೇಶ ಕಳಿಸಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂದೇಶ ಕಳಿಸಿದ ಮೊಬೈಲ್ ಸಂಖ್ಯೆಯ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.








