ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ದಂಧೆಕೋರರ ವಿರುದ್ಧ ಸಮರ ಮುಂದುವರೆಸಿರುವ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಗಳಿಂದ 10.59 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ವಿದೇಶಿ ಪ್ರಜೆಗಳೂ ಸೇರಿದಂತೆ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವಿವಿಧ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಸೆನೆಗಲ್ ಪ್ರಜೆಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಬಂಧಿತ ಆರೋಪಿಯಾಗಿದ್ದು, 29 ಎಲ್‌ಎಸ್‌ಡಿ ಮಾತ್ರೆಗಳು, 546 ಗ್ರಾಂ ಎಂಡಿಎಂಎ, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್ ಹಾಗೂ 27 ಎಲ್‌ಎಸ್‌ಡಿ ಸ್ಟ್ರಿಪ್ಸ್ ಸೇರಿದಂತೆ 1.5 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ರೀಡಾ ವೀಸಾ ಪಡೆದು ಭಾರತಕ್ಕೆ ಬಂದು ಮಾದಕ ದಂಧೆಯಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾ ಮೂಲದ ಕೊರ್ಲಿ ಡೇನಿಯಲ್ ಎಂಬಾತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಆಯೋಜಿಸುತ್ತಿದ್ದ ಫುಟ್‌ಬಾಲ್ ಪಂದ್ಯಗಳಲ್ಲಿ ಆಡುತ್ತಿದ್ದ ಆರೋಪಿ, ಮತ್ತೊಂದೆಡೆ ಮಾದಕ ಪದಾರ್ಥಗಳ ದಂಧೆಯಲ್ಲಿ ತೊಡಗಿದ್ದ. ಬಂಧಿತನಿಂದ 4.48 ಲಕ್ಷ ಮೌಲ್ಯದ 56 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್ ವಶಪಡಿಸಿಕೊಳ್ಳಲಾಗಿದೆ.








