ಬೆಂಗಳೂರು : ಡಿಐಜಿಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಕಳೆದ ಜನವರಿ 7ರಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸರ್ಕಾರ ವರ್ಗಾಯಿಸಿತ್ತು. ರಾಜ್ಯ ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರಿಗೆ ಹಿನ್ನಡೆಯಾಗಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸಿಎಟಿ ವಜಾಗೊಳಿಸಿದೆ.
ಬಳ್ಳಾರಿ ವಲಯದ ಡಿಐಜಿಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಕಳೆದ ಜನವರಿ 7ರಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್ಇ) ಸರ್ಕಾರ ವರ್ಗಾಯಿಸಿತ್ತು. ಇದನ್ನು ಪ್ರಶ್ನಿಸಿ ಸಿಎಟಿಗೆ ವರ್ತಿಕಾ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದ್ದು, ಅರ್ಜಿದಾರರ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ವರ್ಗಾವಣೆಗೆ ಕಾರಣವೇನು?
ಜನವರಿ 1ರಂದು ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಬ್ಯಾನರ್ ಕಟ್ಟುವ ವಿಚಾರವಾಗಿ ಬಳ್ಳಾರಿಯ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಅವರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿ ಗಲಭೆಗೆ ಕಾರಣವಾಗಿತ್ತು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ತಗುಲಿ ಸಾವನ್ನಪ್ಪಿದ್ದ. ದುರ್ಘಟನೆ ಸಂಬಂಧ ಬಳ್ಳಾರಿ ಎಸ್ಪಿಯಾಗಿದ್ದ ಪವನ್ ನೆಜ್ಜೂರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಜ. 7ರಂದು ಡಿಐಜಿಪಿ ವರ್ಟಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿತ್ತು.








