ಬೆಂಗಳೂರು: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ಪರಿಶಿಷ್ಟ ಜಾತಿ (SC) ಒಳಮೀಸಲಾತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುಮಾರು 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಏಪ್ರಿಲ್ 27, 2026 ರಂದು ಸರ್ಕಾರವು ಅಧಿಕೃತ ಆದೇಶ ಹೊರಡಿಸಿದ್ದು, ಉಚ್ಚ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸಲು ಹಸಿರು ನಿಶಾನೆ ನೀಡಲಾಗಿದೆ.
ಒಳಮೀಸಲಾತಿ ಹಂಚಿಕೆ ಹೇಗೆ?
ನ್ಯಾಯಾಲಯದ ಆದೇಶದಂತೆ ಶೇ. 50ರ ಮೀಸಲಾತಿ ಮಿತಿಯೊಳಗೆ, ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಒಟ್ಟು ಶೇ. 15 ಮೀಸಲಾತಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ:
ಪ್ರವರ್ಗ – ಎ: ಶೇ. 5.25
ಪ್ರವರ್ಗ – ಬಿ: ಶೇ. 5.25
ಪ್ರವರ್ಗ – ಸಿ: ಶೇ. 4.5
ವಿಶೇಷವಾಗಿ, ಪ್ರವರ್ಗ – ಸಿ ಅಡಿಯಲ್ಲಿ ಬರುವ ಹುದ್ದೆಗಳು ಅಥವಾ ಶಿಕ್ಷಣದ ಸೀಟುಗಳಲ್ಲಿ ಶೇ. 20ರಷ್ಟು ಭಾಗವನ್ನು ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲಾಗಿದೆ. ಇದು ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ನೇಮಕಾತಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ
ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ವಿಳಂಬ ಮಾಡದೆ ತಕ್ಷಣವೇ ಆರಂಭಿಸುವಂತೆ ರಾಜ್ಯದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸಿಎಂ ಸೂಚಿಸಿದ್ದಾರೆ.
“ನಮ್ಮ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ನುಡಿದಂತೆ ನಡೆದಿದೆ. ‘ಸರ್ವರಿಗೂ ಸಮಪಾಲು, ಸಮಬಾಳು’ ಎನ್ನುವ ತತ್ವದಡಿ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ,” ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳಲ್ಲಿ ಹರ್ಷ
ಕಳೆದ ಕೆಲವು ಸಮಯದಿಂದ ನೇಮಕಾತಿ ಪ್ರಕ್ರಿಯೆಗಳ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವಜನತೆಗೆ ಈ ಆದೇಶವು ಹೊಸ ಭರವಸೆ ನೀಡಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಒಳಮೀಸಲಾತಿ ಜಾರಿಯಾಗುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ವಿಚಾರದಲ್ಲಿ ನಮ್ಮ ಸರ್ಕಾರವು ಕೈಗೊಂಡಿರುವ ಮಹತ್ವದ ನಿರ್ಧಾರದ ಅನ್ವಯ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮುಂದುವರೆಸಲು ದಿ.27.04.2026ರಂದು ಸರ್ಕಾರವು ಆದೇಶಿಸಿದೆ.
ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಆದೇಶದನ್ವಯ ಶೇ.50 ಮೀಸಲಾತಿ ಪ್ರಮಾಣವನ್ನು… pic.twitter.com/JxeB1NH6rT
— Siddaramaiah (@siddaramaiah) April 28, 2026








