ಬೆಂಗಳೂರು : ದಿನಾಂಕ 09/02/2026 ರಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರನ್ನು ಭೇಟಿ ಮಾಡಿ, ವಾಹನ-4 ಪೋರ್ಟಲ್ ಮೂಲಕ ರಾಜ್ಯದಲ್ಲಿ “ಭಾರತ್ ಟ್ಯಾಕ್ಸಿ” ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರಲು ಮನವಿ ಸಲ್ಲಿಸಿರುತ್ತಾರೆ.
ಖಾಸಗಿ ಅಗ್ರಿಗೇಟರ್ಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿರುವುದರಿಂದ ಕೇಂದ್ರ ಸರ್ಕಾರವು “ಭಾರತ್ ಟ್ಯಾಕ್ಸಿ” ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದಲ್ಲಿ ಈ ಯೋಜನೆಯನ್ನು ವಾಹನ್ ಪೋರ್ಟಲ್ ಮೂಲಕ ತರಬೇಕೆಂದು, ಅಗ್ರಿಗೇಟರ್ ವ್ಯವಸ್ಥೆಯಲ್ಲಿ ಚಾಲಕರಿಂದ ಪ್ರತಿ ಪ್ರಯಾಣಕ್ಕೆ 20% ರಿಂದ 35% ರವರೆಗೆ ಕಮಿಶನ್ ಪಡೆಯುತ್ತಿರುವುದರಿಂದ ಚಾಲಕರಿಗೆ ತೊಂದರೆಯುಂಟಾಗುತ್ತಿರುವುದಾಗಿ, ವಾಹನ-4 ಪೋರ್ಟಲ್ ಯೋಜನೆಯಿಂದ ನೋಂದಣಿ, ಪರವಾನಗಿ, ವಿಮೆ ಸುಲಭವಾಗಿ ಪಾರದರ್ಶಕವಾಗಿ ದೊರೆಯುವಂತಾಗುತ್ತದೆ. ಇದರಿಂದ ಪ್ರಯಾಣಿಕರ ಸುರಕ್ಷತೆ, ಅಪಘಾತ ಅಥವಾ ಅನಾಹುತದ ಸಂದರ್ಭದಲ್ಲಿ ಪರಿಹಾರ ದೊರೆಯುವುದಾಗಿ, (ಆದರೆ ಸದರಿ ಯೋಜನೆಯಲ್ಲಿ ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಸೇರಿಸಬಾರದೆಂದು) ಸೇರಿಸಿದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಪ್ರಯಾಣಿಕರ ಜೀವಭದ್ರತೆಗೆ ಅಪಾಯ ಉಂಟಾಗುತ್ತಿರುವ ಬಗ್ಗೆ ಪೊಲೀಸ್ ವರದಿಗಳು ಪೂರಕವಾಗಿರುತ್ತವೆಯೆಂದು ತಮ್ಮ ಪತ್ರದಲ್ಲಿ ತಿಳಿಸಿರುತ್ತಾರೆ.
ಭಾರತ್ ಟ್ಯಾಕ್ಸಿ ಯೋಜನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಸಹಕಾರ ಸಚಿವಾಲಯ, ಭಾರತ ಸರ್ಕಾರ ರವರಿಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಪ್ರಸ್ತಾವನೆಯ ಬಗ್ಗೆ ಪತ್ರ ಬರೆಯಲಾಗುವುದು ಎಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ತಿಳಿಸಿದರು.








