ಬೆಂಗಳೂರು: ಕೇಂರ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತಂತೆ ಕೆಲ ಪ್ರಶ್ನೆಗಳನ್ನು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಇಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಎಂಎಲ್ಸಿ ರಮೇಶ್ ಬಾಬು ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುಳ್ಳು ಪ್ರಚಾರದ ಜೊತೆಗೆ ಸುಳ್ಳು ಹೇಳಿಕೆ ನೀಡಿರುತ್ತಾರೆ. ಕೇಂದ್ರ ಬಿಜೆಪಿ ಕರ್ನಾಟಕದ ಮೇಲೆ ರೈಲ್ವೆ ಯೋಜನೆಗಳಾಗಲಿ, ಕೇಂದ್ರದ ಯೋಜನೆಗಳಾಗಲಿ, ಕೇಂದ್ರದ ಅನುದಾನಗಳಾಗಲಿ ಅಥವಾ ಸಹಾಯಧನವಾಗಲಿ ನೀಡುವ ಕುರಿತು ನಿರಂತರ ಅನ್ಯಾಯ ಮಾಡುತ್ತಿದೆ ಎಂದಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಬುಲೆಟ್ ಟ್ರೈನ್ ಕಾರಿಡಾರ್ಗಳಿಂದ ಕರ್ನಾಟಕಕ್ಕೆ ಲಾಭ” ಎಂದು ಹೇಳಿರುವುದು ಪೂರ್ಣ ಸುಳ್ಳು ಅಸಂಬದ್ಧ ಮತ್ತು ಜನರನ್ನು ದಾರಿ ತಪ್ಪಿಸುವ ಪ್ರಚಾರವಾಗಿದೆ. ಇತರೆ ರಾಜ್ಯಗಳಿಗೆ ನೀಡಿರುವ ಯೋಜನೆಗಳಲ್ಲಿ ಮುಂದುವರೆದ ಭಾಗವಾಗಿ ಕರ್ನಾಟಕವನ್ನು ತಲುಪುತ್ತಿರುವ ರೈಲು ಯೋಜನೆಗಳಿಗೆ ಕರ್ನಾಟಕಕ್ಕೆ ನೀಡಿರುವ ಯೋಜನೆಗಳ ರೀತಿಯಲ್ಲಿ ಹಳಿತಪ್ಪಿಸುವ ಪ್ರಯತ್ನದಲ್ಲಿ ಹೇಳಿಕೆ ನೀಡಿರುತ್ತಾರೆ. ಬುಲೆಟ್ ಟ್ರೈನ್ ಕಾರಿಡಾರ್ ಕರ್ನಾಟಕಕ್ಕೆ ಲಾಭವಾಗುತ್ತದೆ ಎನ್ನುವುದು ರಾಜಕೀಯ ವಂಚನೆ ಹೊರತು ಇನ್ನೇನೂ ಅಲ್ಲ ಎಂದು ಗುಡುಗಿದ್ದಾರೆ.
ಕೇಂದ್ರ ಸರ್ಕಾರವು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಆಗಿನ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕಕ್ಕಾಗಿ ಪ್ರಸ್ತಾಪಿಸಿದ್ದ ಅನೇಕ ಮಹತ್ವದ ರೈಲ್ವೆ ಯೋಜನೆಗಳನ್ನು ಇಂದಿನವರೆಗೆ ಜಾರಿಗೆ ತರಲು ವಿಫಲವಾಗಿದೆ ಎಂದಿದ್ದಾರೆ.
ಹೊಸ ರೈಲು ಮಾರ್ಗಗಳು, ಡಬ್ಲಿಂಗ್ ಮತ್ತು ಎಲೆಕ್ಟ್ರಿಫಿಕೇಶನ್ ಯೋಜನೆಗಳು, ಉತ್ತರ ಕರ್ನಾಟಕ–ಹೈದರಾಬಾದ್, ಕಲಬುರಗಿ–ಬೀದರ್, ಹುಬ್ಬಳ್ಳಿ–ಅಂಕೋಲಾ ಮುಂತಾದ ಸಂಪರ್ಕ ಯೋಜನೆಗಳು, ದಕ್ಷಿಣ ಪಶ್ಚಿಮ ರೈಲ್ವೆ ವಲಯದ ಬಲವರ್ಧನೆ ಈ ಎಲ್ಲಾ ಯೋಜನೆಗಳು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ವರ್ಷಗಳ ಕಾಲ ಧೂಳು ತಿನ್ನುತ್ತಿವೆ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಕರ್ನಾಟಕದ ವಿರುದ್ಧದ ಕೇಂದ್ರ ಬಿಜೆಪಿ ಸರ್ಕಾರದ ರಾಜಕೀಯ ಪ್ರತೀಕಾರ ಎಂಬುದಾಗಿ ಹೇಳಿದ್ದಾರೆ.
ಬಿಜೆಪಿಯ ಒಳಗುಂಪುಗಾರಿಕೆಯ ಇನ್ನೊಂದು ಸ್ಪಷ್ಟ ಉದಾಹರಣೆ ಎಂದರೆ ಕರ್ನಾಟಕಕ್ಕೆ ಸಂಬಂಧಿಸಿದ ರೈಲ್ವೆ ವಿಷಯದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸದೇ ಇರುವುದು. ಇದು ಕೇವಲ ಶಿಷ್ಟಾಚಾರದ ಉಲ್ಲಂಘನೆ ಅಲ್ಲ. ಬಿಜೆಪಿಯ ಒಳಜಗಳ, ಗುಂಪುಗಾರಿಕೆ ಮತ್ತು ಕರ್ನಾಟಕದ ನಾಯಕರನ್ನು ತುಳಿದು ಹಾಕುವ ಮನಸ್ಥಿತಿಯ ಪ್ರತಿಬಿಂಬ ಎಂಬುದಾಗಿ ಕಿಡಿಕಾರಿದ್ದಾರೆ.
ಕರ್ನಾಟಕದ ವಿಷಯದ ಮೇಲೆ ಕರ್ನಾಟಕದ ಸಚಿವರೇ ಇಲ್ಲದೆ ಪತ್ರಿಕಾಗೋಷ್ಠಿ ಯಾಕೆ? ಇದು ಕೇಂದ್ರ ಸರ್ಕಾರದ ತೀರ್ಮಾನವೇ, ಅಥವಾ ಬಿಜೆಪಿ ಒಳರಾಜಕೀಯದ ಫಲವೇ? ಉತ್ತರ ಭಾರತದ ರಾಜ್ಯಗಳಿಗೆ ಸಾವಿರಾರು ಕೋಟಿ ರೂ. ಯೋಜನೆಗಳು, ಕರ್ನಾಟಕಕ್ಕೆ ಮಾತ್ರ ಭ್ರಮೆ ಮತ್ತು ಸುಳ್ಳು ಹೇಳಿಕೆಗಳೇ? ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕದ ಜನತೆಗೆ ಸ್ಪಷ್ಟ ಉತ್ತರ ಕೊಡಬೇಕು ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಯಾಕೆ ಜಾರಿಗೆ ತರಲಾಗಿಲ್ಲ? ಕರ್ನಾಟಕಕ್ಕೆ ನೀಡಬೇಕಾದ ನ್ಯಾಯಸಮ್ಮತ ರೈಲ್ವೆ ಅನುದಾನವನ್ನು ಯಾಕೆ ತಡೆಹಿಡಿಯಲಾಗಿದೆ? ಸೋಮಣ್ಣರನ್ನು ಪತ್ರಿಕಾಗೋಷ್ಠಿಯಿಂದ ದೂರವಿಟ್ಟ ಹಿನ್ನಲೆಯಲ್ಲಿ ಯಾರು ಹೊಣೆ? ಎಂದು ಕೇಳಿದ್ದಾರೆ.
ಕರ್ನಾಟಕವನ್ನು ಎರಡನೇ ದರ್ಜೆಯ ರಾಜ್ಯವಾಗಿ ಕಾಣುವ ಈ ಧೋರಣೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇದು ಕೇವಲ ಅಭಿವೃದ್ಧಿಯ ಪ್ರಶ್ನೆಯಲ್ಲ. ನ್ಯಾಯ, ಗೌರವ ಮತ್ತು ಫೆಡರಲಿಸಂ ಮೇಲಿನ ದಾಳಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಪದೇಪದೇ ಇಂತಹ ಅನ್ಯಾಯಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ನಡೆಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರದ ಈ ಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಖಂಡಿಸಿದ್ದಾರೆ.
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ








