ನೇಪಾಳ : ನೇಪಾಳದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮದುವೆಗೆ ಹೋಗುತ್ತಿದ್ದ ಬಸ್ ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 45 ಪ್ರಯಾಣಿಕರು ಗಾಯಗೊಂಡಿದ್ದಾರೆ.
ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿ, ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಆಳವಾದ ಕಣಿವೆಗೆ ಉರುಳಿತು. ಈ ಭೀಕರ ಅಪಘಾತದಲ್ಲಿ ಕನಿಷ್ಠ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 45 ಜನರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ರಾತ್ರಿ 8 ಗಂಟೆಗೆ ಬೈತಾಡಿ ಜಿಲ್ಲೆಯ ಪುರ್ಚೌರಿ ಪುರಸಭೆ ಪ್ರದೇಶದಿಂದ ಬರುತ್ತಿದ್ದ ಬಸ್ ಪರ್ವತ ರಸ್ತೆಯ 200 ಮೀಟರ್ ಕೆಳಗೆ ಕಂದಕಕ್ಕೆ ಉರುಳಿ ಈ ಅಪಘಾತ ಸಂಭವಿಸಿದೆ.ಪಶ್ಚಿಮ ನೇಪಾಳದ ಪುರ್ಚೌರಿ-7 ಪ್ರದೇಶದ ಬದ್ಗೌದಲ್ಲಿ ನಡೆದ ಅಪಘಾತದಲ್ಲಿ ಏಳು ಪುರುಷರು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದು, 45 ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರವಾದ ಕಾರಣ ತಕ್ಷಣ ತಿಳಿದುಬಂದಿಲ್ಲ. ಗುರುವಾರ ರಾತ್ರಿ ಅಪಘಾತ ಸಂಭವಿಸಿದಾಗ ಬಸ್ನಲ್ಲಿ ಸುಮಾರು 60 ಜನರು ಇದ್ದರು ಎಂದು ಮುಖ್ಯ ಜಿಲ್ಲಾ ಅಧಿಕಾರಿ ಕೃಷ್ಣ ಥಾಪಾ ತಿಳಿಸಿದ್ದಾರೆ. ನೇಪಾಳ ಸೇನೆ, ನೇಪಾಳ ಪೊಲೀಸರು, ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ಜನರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.








