ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆ ಸೇರ್ಪಡೆ ವಿಚಾರವಾಗಿ ಕಳೆದ 24 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಯಾವುದೇ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿಲ್ಲ ಎಂದು ರೈತ ನಾಯಕಿ ಸುನಂದಾ ಜಯರಾಂ ಬುಧವಾರ ಹೇಳಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕ ಕೆ.ಎಂ.ಉದಯ್ ಅವರು ಕಳೆದೆರಡು ವರ್ಷಗಳಿಂದ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಅವರ ಕಾರ್ಯ ವೈಖರಿ ಬಗ್ಗೆ ನಾವು ಯಾವುದೇ ವಿರೋಧ ಮಾಡುತ್ತಿಲ್ಲ. ಆದರೆ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆ ಸೇರ್ಪಡೆ ವಿಚಾರವಾಗಿ ನಾವು ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರ್ಪಡೆ ಮಾಡುವ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದಾಗ ಎಲ್ಲಾ ಸದಸ್ಯರು ನಗರಸಭೆ ಸೇರ್ಪಡೆ ವಿಷಯವನ್ನು ತಿರಸ್ಕರಿಸಿದ್ದಾರೆ. ಈ ಸಂಬಂಧ ಗ್ರಾಮದಲ್ಲೂ ಯಾವುದೇ ಗ್ರಾಮಸಭೆಯನ್ನು ನಡೆಸದೆ ಮತ್ತೋಂದು ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸದೆ ಸದಸ್ಯರ ಗಮನಕ್ಕೂ ತರದೆ ಅನುಮೋದನೆ ದೊರೆತಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪ ಮಾಡಿದರು.
ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಗ್ರಾಮದ ಜನತೆ ಹೋರಾಟ ನಡೆಸಲು ನಿರ್ಧರಿಸಲಾಯಿತು. ಆಗ ಶಾಸಕರೇ ದೂರವಾಣಿ ಕರೆ ಮಾಡಿ ನಗರಸಭೆ ಸೇರ್ಪಡೆ ಆಗುವುದು ಬೇಡ ಎಂದರೇ ಕೈ ಬಿಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಶಾಸಕ ಉದಯ್ ಅವರು ಈಗ ಎಲ್ಲಾ ಸದಸ್ಯರು ಒಪ್ಪಿಗೆಯ ನಂತರ ಅನುಮೋದನೆ ನೀಡಿದ ಮೇಲೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಹೀಗಾಗಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆ ಸೇರ್ಪಡೆಯಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 80 ರಷ್ಟು ಅಭಿವೃದ್ಧಿಯಾಗಿದೆ. ನಮ್ಮಲ್ಲೆ ಸಾಕಷ್ಟು ಅನುದಾನ, ತೆರಿಗೆ ಹಾಗೂ ವಿವಿಧ ರೀತಿಯ ಅನುದಾನಗಳಿಂದ ಅಭಿವೃದ್ಧಿ ಮಾಡಿಕೊಳ್ಳಲು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ. ಗ್ರಾ.ಪಂ ವ್ಯಾಪ್ತಿಯ ಮಕ್ಕಳಿಗೆ ಗ್ರಾಮೀಣ ಕೃಪಾಂಕ, ನರೇಗಾ ಯೋಜನೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅನುದಾನ, ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ವಿವಿಧ ಮೂಲಗಳಿಂದ ಗ್ರಾ.ಪಂ ವ್ಯಾಪ್ತಿ ಸಾಕಷ್ಟು ಅಭಿವೃದ್ಧಿ ಹೊಂದಲಿದ್ದು, ಹೀಗಾಗಿ ನಗರಸಭೆಗೆ ಸೇರ್ಪಡೆ ಮಾಡುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇಲ್ಲಿಯವರೆಗೂ ಜಿಲ್ಲಾ ಮತ್ತು ರಾಜ್ಯದ ಹಲವಾರು ಜನಪ್ರತಿನಿಧಿಗಳು ನಮ್ಮ ಚಳುವಳಿಗಳನ್ನು ಗೌರವಿಸಿದ್ದಾರೆ. ನಮ್ಮ ಹೋರಾಟ ಯಾರದೋ ಕುಮ್ಮಕ್ಕಿನಿಂದ ನಡೆಯುತ್ತಿಲ್ಲ. ನಮ್ಮ ಪ್ರತಿಭಟನೆ ಗೌರವಿಸಿ ಸಂಘ ಸಂಸ್ಥೆಗಳು, ಸಾಹಿತಿಗಳು, ಹೋರಾಟಗಾರರು, ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಸ್ವತಃ ಬೆಂಬಲಿಸುತ್ತಿದ್ದಾರೆ. ಇದಕ್ಕೆ ಬೇರೆ ರೂಪ ಕೊಟ್ಟು ಚಳುವಳಿಗೆ ತಳಕು ಹಾಕುವುದು ಸರಿಯಲ್ಲ. ನಮ್ಮ ಗ್ರಾಮ ಪಂಚಾಯಿತಿಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇರೆ ರೀತಿಯ ಗಂಭೀರ ಸಂದರ್ಭಗಳು ಎದುರಾದರೇ ಅದಕ್ಕೆ ನೀವೇ ಹೊಣೆಯಾಗುತ್ತಿರಿ ಎಂದು ಶಾಸಕ ಉದಯ್ ಅವರಿಗೆ ಪ್ರತಿಭಟನಕಾರರು ಎಚ್ಚರಿಸಿದರು.
ಸುದ್ದಿಗೊಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ರಾಧಾ, ಸದಸ್ಯರಾದ ಶಶಿಕುಮಾರ್, ಭಾಗ್ಯ, ಶಿವಯ್ಯ, ಜಯಮ್ಮ, ಲಕ್ಷ್ಮಮ್ಮ, ಸುವರ್ಣ ಮುಖಂಡರಾದ ಪ್ರಕಾಶ್, ಚಂದ್ರಶೇಖರ್, ಶಂಕರ್, ಮೋಹನ್ ಕುಮಾರ್ ಚಂದ್ರು, ಲೋಕೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಟ್ರಸ್ಟ್ ಸುಪರ್ದಿಗೆ ತೋಪಿನ ತಿಮ್ಮಪ್ಪ ದೇವಸ್ಥಾನ ನೀಡಿ; ಮದ್ದೂರಿನ ಆಬಲವಾಡಿ ಗ್ರಾಮಸ್ಥರ ಆಗ್ರಹ








