ಬೆಂಗಳೂರು : ವೇತನ, ಪಿಎಫ್ (ಪ್ರಾವಿಡೆಂಟ್ ಫಂಡ್), ಇಎಸ್ಐ ಮತ್ತು ಇತರ ಸವಲತ್ತುಗಳ ಪಾವತಿಯಲ್ಲಿ ವಿಳಂಬದ ಜೊತೆಗೆ ಕಡಿಮೆ ಪಾವತಿ ಮೂಲಕ ಹೊರಗುತ್ತಿಗೆ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹಾಗಾಗಿ ಡಿಸೆಂಬರ್ 8 ರಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಸರ್ಕಾರ ಮಂಡಿಸಲು ತಯಾರಿ ನಡೆಸಿದೆ.
ಖಾಸಗಿ ಹೊರಗುತ್ತಿಗೆ ಸಂಸ್ಥೆಗಳ ಜೊತೆಗಿನ ಎಲ್ಲಾ ವ್ಯವಸ್ಥೆ ಮತ್ತು ಒಪ್ಪಂದಗಳನ್ನು ಸರ್ಕಾರವು ಮಾರ್ಚ್ 31, 2028 ರೊಳಗೆ ಹಂತಹಂತವಾಗಿ ಕಡಿತಗೊಳಿಸಲಿದೆ. ಅಲ್ಲಿಯವರೆಗೆ, ಹೊರಗುತ್ತಿಗೆ ಪಡೆದ ಉದ್ಯೋಗಿಗಳನ್ನು ನಿರ್ವಹಿಸಲು ರಾಜ್ಯಾದ್ಯಂತ ‘ಬೀದರ್ ಮಾದರಿ’ಯನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.








