ಕಲಬುರ್ಗಿ : ಕಲ್ಬುರ್ಗಿ ವಿಜಯಪುರ, ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಕಲಬುರ್ಗಿಯಲ್ಲಿ ನದಿ ದಡದಲ್ಲಿರುವ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ನದಿ ದಡದಲ್ಲಿರುವ ಹಲವು ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ತಕ್ಷಣ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒಗಳಿಗೆ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು, ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.