ಬೆಂಗಳೂರು : ಲೋಕಸಭೆ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರದಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ದಾಖಲೆ ಸಮೇತ ಆರೋಪ ಮಾಡಿದ್ದರು. ಇದೀಗ ಆಳಂದ ಕ್ಷೇತ್ರದಲ್ಲಿ ಕೂಡ ಮತಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರು ಅಧಿಕೃತ ಮತಗಳ್ಳತನ ಮಾಡುತ್ತಿರುವ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ಡಿಲೀಟ್ ಆಗ್ತಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಎಲೆಕ್ಷನ್ ಕಮಿಷನ್ಗೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ 6018 ಮತದಾರರಲ್ಲಿ ಯಾರ್ಯಾರು ಅರ್ಜಿ ಹಾಕಿದ್ರು, ಅದರಲ್ಲಿ 28 ಜನಕ್ಕೆ ಮಾತ್ರ ಮಾಹಿತಿ ಇತ್ತು. ಉಳಿದ ಅರ್ಜಿದಾರರಿಗೆ ಯಾವುದೇ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದರು.
ಎರಡು ವರ್ಷವಾದರೂ ಇವರು 18 ಪತ್ರ ಬರೆದರೂ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಬಿಜೆಪಿಗಾಗಿ ಮಾಡುತ್ತಾ ಇದ್ದಾರೆ. ಯಾರು ಮಾಡುತ್ತಿದ್ದಾರೆ, ಏನ್ ಮಾಡುತ್ತಿದ್ದಾರೆ ಅಂತ ನಮಗೆ ಈಗಾಗಲೇ ಮಾಹಿತಿ ಇದೆ. ಆದರೆ ಅಧಿಕೃತ ಮಾಹಿತಿ ಎಲೆಕ್ಷನ್ ಕಮಿಷನ್ನಿಂದ ಬರಬೇಕು. ಎಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ತನಿಖೆ ಸ್ಥಗಿತಗೊಂಡಿದೆ ಅದು ಮುಂದುವರಿಬೇಕು ಅಂದರೆ ಚುನಾವಣಾ ಆಯೋಗ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.