ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ಇಂಜಿನಿಯರಿಂಗ್ ಸೀಟ್ ಹಂಚಿಕೆ ಹಗರಣದ ಸಂಬಂಧ ಬೆಂಗಳೂರಿನ ಪ್ರತಿಷ್ಠಿತ ಮೂರು ಖಾಸಗಿ ಕಾಲೇಜುಗಳು ಒಳಗೊಂಡಂತೆ 17 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಈ ಸಂಬಂಧ 1.37 ಕೋಟಿ ರೂ.ನಗದು ಸೇರಿದಂತೆ ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಈ ಕುರಿತು ED ಸಾಮಾಜಿಕ ಜಾಲತಾಣ X ನಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸೀಟು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಆರೋಪದಡಿ ನಗರದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಆಕಾಶ್ ಇನ್ ಸ್ಟಿಟ್ಯೂಟ್ ಇಂಜಿನಿಯರಿಂಗ್ ಕಾಲೇಜು ಹಾಗೂ ನ್ಯೂ ಹಾರಿಜನ್ ಕಾಲೇಜುಗಳು, ಪ್ರಕರಣಕ್ಕೆ ಸಂಬಂಧಿತ ಆರೋಪಿತರ ಸದಸ್ಯರ ಮನೆ, ಕಚೇರಿ ಸೇರಿದಂತೆ 17 ಕಡೆಗಳಲ್ಲಿ ಜೂನ್ 25 ಹಾಗೂ 26ರಂದು ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 1.37 ಕೋಟಿ ರೂ. ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸೀಟು ಬ್ಲಾಕಿಂಗ್ ಹಗರಣ ಸಂಬಂಧ ಕಳೆದ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮೂರು ಖಾಸಗಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಮಲ್ಲೇಶ್ವರ ಠಾಣೆಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಕಳೆದ ತಿಂಗಳು ಸಾವಿರಾರು ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಾರ್ಜ್ ಶೀಟ್ ನಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ತನಿಖೆಯಲ್ಲಿ ಕಂಡುಬಂದಿದ್ದರಿಂದ ಪಿಎಂಎಲ್ ಎ ನಡಿ ಆರೋಪದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಕಾಲೇಜಿನ ಮ್ಯಾನೇಜ್ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದಲೇ ಈ ಡೀಲ್ ನಡೆಯುತ್ತಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್ಗೆ ಹಾಜರಾಗಿ ಕಾಲೇಜ್ ಆಯ್ಕೆಯಾಗದೇ ಇರುವವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಡೀಲ್ನಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾದ ಶಂಕೆಯಿರುವ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ಆರಂಭಿಸಿದ್ದರು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪೂರಕ ದಾಖಲಾತಿ ಹಾಗೂ ಡಿಜಿಟಲ್ ಡಿವೈಸ್ ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ED, Bengaluru has conducted search operations at 17 locations related to Seat Blocking Scam in private engineering colleges in Bengaluru on 25.06.2025 and 26.06.2025 at the office premises of BMS College of Engineering, Akash Institute of Engineering and Technology, New Horizon…
— ED (@dir_ed) June 28, 2025