ಉತ್ತರಪ್ರದೇಶ : ನಾವು ಗ್ಯಾಸ್ ಹಾಗೂ ಗೀಸರ್ ಸ್ಫೋಟವಾಗುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಉತ್ತರಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಸ್ಪೋಟ ವಾಗಿ ಶೌಚಾಲಯಕ್ಕೆ ತೆರಳಿದ್ದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಕೊಟ್ಟಾಲಿ ಪ್ರದೇಶದಲ್ಲಿ ನಡೆದಿದೆ.
ಹೌದು ಶೌಚಾಲಯದ ವೆಸ್ಟರ್ನ್ ಟಾಯ್ಲೆಟ್ ಸೀಟ್ ಸ್ಫೋಟಗೊಂಡು 20 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ. ಮನೆಯ ಮಾಲೀಕ ಸುನಿಲ್ ಪ್ರಧಾನ್ ಅವರ 20 ವರ್ಷದ ಮಗ ಆಶು ನಗರ್ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿದ್ದರು. ಮಲವಿಸರ್ಜನೆಯ ನಂತರ ಫ್ಲಶ್ ಮಾಡಿದರು.
ಈ ವೇಳೆ ವೆಸ್ಟರ್ನ್ ಟಾಯ್ಲೆಟ್ ಸೀಟ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಸ್ಫೋಟದಿಂದ ಆಶು ಅವರ ಮುಖ, ಕೈಗಳು, ಕಾಲುಗಳು ಮತ್ತು ಖಾಸಗಿ ಭಾಗಗಳು ಸುಟ್ಟುಹೋಗಿವೆ.ಸ್ಫೋಟದ ಶಬ್ದ ಕೇಳಿ ಕುಟುಂಬ ಸದಸ್ಯರು ಶೌಚಾಲಯಕ್ಕೆ ಧಾವಿಸಿದರು. ಆಶು ಅವರನ್ನು ಬೆಂಕಿಯಿಂದ ರಕ್ಷಿಸಿ, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಶು ಅವರ ತಂದೆ ಸುನಿಲ್ ಪ್ರಧಾನ್, ಸ್ಫೋಟಕ್ಕೆ ಮೀಥೇನ್ ಅನಿಲ ಸೋರಿಕೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ. ಮನೆಯ ಶೌಚಾಲಯ ಮತ್ತು ಅಡುಗೆಮನೆಯ ನಡುವಿನ ಶಾಫ್ಟ್‌ನಲ್ಲಿ ಎಸಿ ಎಕ್ಸಾಸ್ಟ್ ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಹಸಿರು ಪಟ್ಟಿಯಿಂದ ಅನಿಲ ಸೋರಿಕೆಯಾಗಿರಬಹುದು ಎಂದು ಅವರು ಹೇಳಿದ್ದಾರೆ.