ಬೆಂಗಳೂರು : ಆಕೆಗೆ ಈಗಾಗಲೇ 7 ಮದುವೆಯಾಗಿತ್ತು. ಆದರೆ ತನಗೆ 7 ಮದುವೆ ಆಗಿದ್ದನ್ನು ಮುಚ್ಚಿಟ್ಟು, ವ್ಯಕ್ತಿಯ ಜೊತೆಗೆ ಎಂಟನೇ ಮದುವೆಯಾದ ಆಕೆ ಮದುವೆಯಾದ ಬಳಿಕ ಪತಿಗೆ ಪಿಎಫ್ ಹಣ ಹಾಗೂ ಚಿನ್ನಾಭರಣ ನೀಡುವಂತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ. ಈ ಕುರಿತು ನೊಂದ ಪತಿ ತನ್ನ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೌದು ಏಳು ಮದುವೆಯಾಗಿರುವ ವಿಚಾರ ಮುಚ್ಚಿಟ್ಟ ಮಹಿಳೆ, ಎಂಟನೇ ಮದುವೆಯಾಗಿ ಪತಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಎಂಟನೆ ಮದುವೆಯಾಗಿದಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಗಣಪತಿ ನಗರ ನಿವಾಸಿ ರಾಮಕೃಷ್ಣ (62) ಎಂಬುವವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್ನ ಎಚ್. ಎಂ. ವಿಜಯಲಕ್ಷ್ಮೀ (54), ನಂದೀಶ (30), ಮಂಡ್ಯದ ರೇಖಾ (40) ಮತ್ತು ವನಜಾ (45) ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ರಾಮಕೃಷ್ಣ ಅವರ ಪತ್ನಿ ಮೃತರಾಗಿದ್ದರು. ರಾಮಕೃಷ್ಣ ಅವರಿಗೆ 2020ರ ನವೆಂಬರ್ನಲ್ಲಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ವಿಜಯಲಕ್ಷ್ಮೀ ಪರಿಚಿತರಾಗಿದ್ದರು. ಬಳಿಕ ರಾಮನಗರದ ತಿಪ್ಪೇಗೌಡನ ದೊಡ್ಡಿಯ ರಾಮದೇವರ ಬೆಟ್ಟದ ರಾಮಾಂಜನೇಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ಮದುವೆಗೂ ಮುನ್ನ ವಿಜಯಲಕ್ಷ್ಮೀ ಅವರು ಈ ಹಿಂದೆ ನನಗೆ ಮದುವೆಯಾಗಿದ್ದು, ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ಬಳಿಕ ಪಿಎಫ್ ಹಣ ಕೊಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರು. ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಂದಲ್ಲ ಎರಡಲ್ಲ ಏಳು ಮದುವೆ!
ವಿಜಯಲಕ್ಷ್ಮೀ ಈ ಹಿಂದೆ ತಾನು ಏಳು ಮದುವೆಯಾಗಿರುವ ವಿಚಾರವನ್ನು ರಾಮಕೃಷ್ಣ ಅವರ ಬಳಿ ಮುಚ್ಚಿಟ್ಟಿದ್ದಾರೆ. ಮದುವೆಯಾದ ವ್ಯಕ್ತಿಗಳ ಗಮನಕ್ಕೆ ಬಾರದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಸ್ ಕೊಡುವಂತೆ ಅವರು ಕೇಳಿದರೆ, ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರೆ. ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ಗಳನ್ನು ದಾಖಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.