ಮಂಗಳೂರು : ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಸ್ವಾಮೀಜಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು, ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಈ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು ಸ್ವಾಮೀಜಿ ಅವರ ವಿಚಾರಣೆಯ ಕುರಿತು ಹಾಗೂ ಬಂಧನದ ಕುರಿತಂತೆ ಪೊಲೀಸರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿನ ಎದುರು ಚಂದ್ರಶೇಖರನಾಥ ಶ್ರೀಗಳು ದೊಡ್ಡವರಲ್ಲ. ಕಾನೂನಿನ ಎದುರು ನಾನು ಸೇರಿ ಸ್ವಾಮೀಜಿಯು ಒಂದೇ. ಈ ದೇಶದಲ್ಲಿರುವ ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬಂಧನ ಪ್ರಕ್ರಿಯೆ ಬಗ್ಗೆಯೂ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಮಂಗಳೂರಿನಲ್ಲಿ ಗೃಹ ಇಲಾಖೆಯ ಸಚಿವ ಪರಮೇಶ್ವರ್ ಹೇಳಿಕೆ ನೀಡಿದರು.
ಹಾಸನ ಸಮಾವೇಶದ ಕುರಿತು ಮಾತನಾಡಿದ ಅವರು, ಅನಾಮಧೇಯ ಪತ್ರವನ್ನು ಬಿಜೆಪಿಯವರೇ ಏಕೆ ಬರೆದಿರಬಾರದು? ಬಿಜೆಪಿಯವರೇ ಅನಾಮಧೇಯ ಪತ್ರ ಬರಿತಾರೆ. ಅದು ನಮಗೆ ಲೆಕ್ಕಕ್ಕೆ ಇಲ್ಲ ಬಿಡಿ. ನಮ್ಮಲ್ಲಿ ಯಾವುದೇ ಅಪಸ್ವರ ಇಲ್ಲ. ನಾನು ತುಮಕೂರಲ್ಲಿ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೆ. ಆದರೆ ನಮಗೆ ಬೇರೆ ಕಾರ್ಯಕ್ರಮ ಕೊಟ್ಟಿದ್ದಾರೆ. ನಮ್ಮ ಪಕ್ಷದಿಂದಲೇ ಸ್ವಾಭಿಮಾನ ಸಮಾವೇಶ ಮಾಡುತ್ತಿದ್ದೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.