ಬೆಂಗಳೂರು : ಗುತ್ತಿಗೆದಾರ ವೇಲು ನಾಯ್ಕರ್ ನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಫ್ ಎಸ್ ಎಲ್ ವರದಿಯ ಪ್ರಕಾರ ಈ ಒಂದು ಆಡಿಯೋದಲ್ಲಿ ಶಾಸಕ ಮುನಿರತ್ನ ಅವರದ್ದೇ ಧ್ವನಿ ಎಂದು FSL ವರದಿಯಲ್ಲಿ ದೃಢಪಟ್ಟಿದೆ.
ಚೆಲುವರಾಜು ಜತೆಗೆ ಮಾತನಾಡುವ ವೇಳೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆಂದು ಗುತ್ತಿಗೆದಾರ ವೇಲು ನಾಯ್ಕರ್ ಅವರು ಮುನಿರತ್ನ ಅವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಸಹ ಪೊಲೀಸರಿಗೆ ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಸೆಪ್ಟೆಂಬರ್ 13 ರಂದು ಎಫ್ಐಆರ್ ದಾಖಲಾಗಿತ್ತು.
ಬಳಿಕ ಸೆ.14ರಂದು ಎಸ್ಐಟಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಆ ವೇಳೆ ಪೆನ್ ಡ್ರೈವ್ ಆಡಿಯೋ ಕ್ಲಿಪ್ ಹಾಗೂ ಬಂಧನ ವೇಳೆ ಪಡೆಯಲಾಗಿದ್ದ ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದರು. ಈಗ ಎಫ್ಎಸ್ಎಲ್ ರಿಪೋರ್ಟ್ ಎಸ್ಐಟಿ ಪೊಲೀಸರ ಕೈಸೇರಿದ್ದು, ಮುನಿರತ್ನ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಆಡಿಯೋ ಧ್ವನಿ ಧೃಡವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.