ನ್ಯೂಯಾರ್ಕ್: ಮರಣ ಎಂಬುದು ಇಂದಿಗೂ ನಿಗೂಢ. ಆದರೆ, ಮನುಷ್ಯ ಸಾಯುವ ಕೆಲವು ದಿನ ಅಥವಾ ವಾರಗಳ ಮೊದಲು ಎಂತಹ ಕನಸುಗಳನ್ನು ಕಾಣುತ್ತಾನೆ? ಅವನ ಮನಸ್ಥಿತಿ ಹೇಗಿರುತ್ತದೆ? ಈ ಬಗ್ಗೆ ನಡೆದಿರುವ ಹೊಸ ಸಂಶೋಧನೆಯೊಂದು ಅತ್ಯಂತ ಆಸಕ್ತಿದಾಯಕ ಮತ್ತು ಭಾವನಾತ್ಮಕ ವಿಚಾರಗಳನ್ನು ಹೊರಹಾಕಿದೆ.
ಅಮೆರಿಕದ ಬಫಲೋದಲ್ಲಿರುವ ‘ಹೋಸ್ಪೈಸ್ ಅಂಡ್ ಪ್ಯಾಲಿಯೇಟಿವ್ ಕೇರ್’ ಸಂಸ್ಥೆಯ ಸಂಶೋಧಕರು ಮರಣಶಯ್ಯೆಯಲ್ಲಿರುವ ನೂರಾರು ರೋಗಿಗಳನ್ನು ಅಧ್ಯಯನಕ್ಕೊಳಪಡಿಸಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.
ಸಾವಿನ ಸಮೀಪವಿರುವ ಶೇ. 80ಕ್ಕಿಂತ ಹೆಚ್ಚು ಜನರು ತಮ್ಮ ಕನಸಿನಲ್ಲಿ ಈಗಾಗಲೇ ಮೃತಪಟ್ಟಿರುವ ತಮ್ಮ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರನ್ನು ಕಾಣುತ್ತಾರೆ. ಈ ಭೇಟಿಯು ಅವರಿಗೆ ಭಯದ ಬದಲು ಸಮಾಧಾನ ಮತ್ತು ನೆಮ್ಮದಿಯನ್ನು ನೀಡುತ್ತದೆ ಎಂದು ವರದಿ ಹೇಳಿದೆ.
ಅನೇಕ ರೋಗಿಗಳು ತಾವು ಎಲ್ಲೋ ದೂರದ ಪ್ರಯಾಣಕ್ಕೆ ಸಿದ್ಧರಾಗುತ್ತಿರುವಂತೆ ಅಥವಾ ರೈಲು, ವಿಮಾನ ಏರುತ್ತಿರುವಂತೆ ಕನಸು ಕಾಣುತ್ತಾರೆ. ಇದು ಅವರು ಜೀವನದ ಮುಂದಿನ ಹಂತಕ್ಕೆ ಸಿದ್ಧರಾಗುತ್ತಿರುವುದರ ಸಂಕೇತವೆಂದು ವಿಶ್ಲೇಷಿಸಲಾಗಿದೆ.
ಕೆಲವು ಸಂದರ್ಭಗಳಲ್ಲಿ, ತಾವು ಮಾಡಬೇಕಾದ ಯಾವುದೋ ಕೆಲಸ ಬಾಕಿ ಉಳಿದಿದೆ ಎಂಬ ಆತಂಕದ ಕನಸುಗಳು ಬೀಳುತ್ತವೆ. ಆದರೆ ಸಾವು ಹತ್ತಿರವಾದಂತೆಲ್ಲಾ ಇಂತಹ ಆತಂಕಕಾರಿ ಕನಸುಗಳು ಕಡಿಮೆಯಾಗಿ, ನೆಮ್ಮದಿಯ ಕನಸುಗಳು ಹೆಚ್ಚಾಗುತ್ತವೆ.








