ಬೆಂಗಳೂರು : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತಯಾಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ದಾಖಲಾಗಿತ್ತು. ಫ್ಲೈಯಿಂಗ್ ಸ್ಕ್ವಾಡ್ ದಾಖಲಿಸಿದ್ದ ಕೇಸ್ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.ಅರ್ಜಿ ವಿಚಾರಣೆ ನಡೆಸಿದ ಬಳಿಕ ನೀತಿ ಸಂಹಿತೆಗಿಂತ ಮೊದಲು ಆಹ್ವಾನಪತ್ರಿಕೆ ಮುದ್ರಣ ಹಿನ್ನೆಲೆ ಕೇಸ್ಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯವರಾದ ಶಿವಪ್ರಸಾದ್ ಅವರ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮೋದಿಗೆ ಮತ ಯಾಚಿಸಿದ್ದಕ್ಕೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಆದರೆ, ಆಹ್ವಾನ ಪತ್ರಿಕೆ ನೀತಿ ಸಂಹಿತೆ ಜಾರಿಗೆ ಮೊದಲು ಮುದ್ರಣವಾಗಿದ್ದ ಕಾರಣ ಹೈಕೋರ್ಟ್ ಕೇಸ್ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೆ?
ಮದುಮಗ ಶಿವಪ್ರಸಾದ್ ಅವರು ತಮ್ಮ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ‘ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್ ನೀಡಿದಂತೆ’ ಎಂದು ಮುದ್ರಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ವರನ ವಿರುದ್ಧ ಏಪ್ರಿಲ್ 17ರಂದು ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ಬಂದಿತ್ತು. ನಂತರ ಚುನಾವಣಾಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಮದುಮಗನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮದುಮಗ ಪರ ವಕೀಲ ಎಂ.ವಿನೋದ್ ಕುಮಾರ್ ಕೇಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಆದರೆ ಚುನಾವಣಾ ನೀತಿಸಂಹಿತೆ ಮಾರ್ಚ್ 16ರಂದು ಜಾರಿಯಾಗಿದೆ. ಹೀಗಾಗಿ ಕೇಸ್ ರದ್ದು ಮಾಡುವಂತೆ ವಕೀಲ ಎಂ.ವಿನೋದ್ ಕುಮಾರ್ ಮನವಿ ಮಾಡಿದರು. ವಾದವನ್ನು ಆಲಿಸಿದ ಹೈಕೋರ್ಟ್ ಕೇಸ್ಗೆ ತಡೆಯಾಜ್ಞೆ ನೀಡಿದೆ.