ತುಮಕೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನವರೇ ಸಿದ್ದರಾಮಯ್ಯಗೆ ರಾಜೀನಾಮೆ ಕೊಡುಸ್ತಾರೆ. ಈಗಾಗಲೇ ಸರಣಿ ಸಭೆಗಳು ಆಗುತ್ತಿವೆ. ಹಾಗಾಗಿ ಈ ಸರ್ಕಾರ ಜಾಸ್ತಿ ದಿನ ಇರಲ್ಲ. ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಯಾರು ಬೇಕಾದರು ಸಿಎಂ ಆಗಲಿ. ಪರಮೇಶ್ವರ ನಮ್ಮ ಜಿಲ್ಲೆಯವರಾಗಿದ್ದರಿಂದ ಅವರೇ ಸಿಎಂ ಆಗಲಿ ಎಂದು ಬಯಸುತ್ತೇವೆ ಎಂದು ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದರು.
ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಪದೇ ಪದೇ ಸ್ಪಷ್ಟನೆ ನೀಡಿದ್ದಾರೆ. ಆದರೆ ವಿಪಕ್ಷ ನಾಯಕರು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ನವರೇ ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಕೊಡಿಸ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಇಂದು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತಿಂಗಳ ಕೊನೆಯ ಅಥವಾ ನವೆಂಬರ್ ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಈ ಸರ್ಕಾರಕ್ಕೆ ಆಯಸ್ಸು ಇಲ್ಲ. ಏಪ್ರಿಲ್ ವೇಳೆಗೆ ಚುನಾವಣೆ ಬಂದರೂ ಬರಬಹುದು ಅಂತ ಹೇಳಿದ್ದೇನೆ. ನಾನು ಇದನ್ನು ಪ್ರತಿಪಾದಿಸುತ್ತೇನೆ ಎಂದು ಹೇಳಿಕೆ ನೀಡಿದರು.
ಸಿದ್ದರಾಮಯ್ಯ ನೈತಿಕತೆ ಇಟ್ಕೊಂಡು ರಾಜೀನಾಮೆ ಕೊಡಲಿ ಸೈಟ್ ಹಿಂದುರಿಸಿದ್ದಾರೆ ಎಂದರೇ 100 ಪರ್ಸೆಂಟ್ ತಪ್ಪಿತಸ್ಥರು. ಇನ್ನೊಂದು ತಿಂಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತೋ ಇರಲ್ವೋ. ಸಿದ್ದರಾಮಯ್ಯ ಅವರಂತೂ ಸಿಎಂ ಆಗಿ ಮುಂದುವರೆಯಲ್ಲ. ಸೂರ್ಯ ಚಂದ್ರರಷ್ಟೇ ರಾಜೀನಾಮೆ ಕೊಡುವುದು ಸತ್ಯ ಎಂದು ತಿಳಿಸಿದರು.