ಬೆಳಗಾವಿ : ಸಾವು ಯಾವಾಗ ಹೇಗೆ ಬರುತ್ತೆ ಎನ್ನುವುದು ಸ್ವತಃ ಸೃಷ್ಟಿಕರ್ತನಿಗೂ ಗೊತ್ತಿಲ್ಲ. ಕೆಲವು ಸಾವುಗಳು ಎಷ್ಟು ಕ್ರೂರವಾಗಿರುತ್ತವೆ ಅಂದರೆ ಊಹಿಸಲು ಸಾಧ್ಯವಿಲ್ಲ. ಇಂತದ್ದೇ ಘಟನೆ ಇದೀಗ ಬೆಳಗಾವಿಯಲ್ಲಿ ನಡೆದಿದ್ದು, ಇನ್ನೇನು ಮದುವೆ ಒಂದು ದಿನ ಬಾಕಿ ಇರುವಾಗಲೇ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ದುರ್ಘಟನೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.
ಹೌದು ನಾಳೆ ಬೆಳಗಾದರೆ ಸಾಕು ನನಗೂ ನಿನಗೂ ಮದುವೆ ಎಂದು ಖುಷಿಯಿಂದ ಹುಡುಗಿಯೊಂದಿಗೆ ಯುವಕ ಮದುವೆ ಸಿದ್ಧತೆ ಬಗ್ಗೆ ಚಪ್ಪರದಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಝುಂಜರವಾಡ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತ ದುರ್ದೈವಿ ಎಂದು ತಿಳಿದುಬಂದಿದೆ.ಸೆ.5 ರಂದು ಮದುವೆ ನಿಶ್ಚಯವಾಗಿತ್ತು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆ ಮುಂದೆ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಾ, ಮೊಬೈಲ್ನಲ್ಲಿ ಮಾತನಾಡುವಾಗ ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಆತನನ್ನು ತುರ್ತಾಗಿ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದರು ಅದಾಗಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.